
ಸಂಜೆವಾಣಿ ನ್ಯೂಸ್
ಮೈಸೂರು : ಮೇ.29:- ಮೇಕೆದಾಟು ಯೋಜನೆಯ ವಿಚಾರವಾಗಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶ ಮಾಡಿ, ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಕಾವೇರಿ ಕ್ರಿಯಾ ಸಮಿತಿ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯರೂ ಆದ ಸಿ. ಎನ್. ಮಂಜೇಗೌಡ ಅವರು ಆಗ್ರಹಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯನ್ನುದ್ದೇಶಿ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.
ಮೇಕೆದಾಟು ಯೋಜನೆಯಿಂದ ಎರಡು ರಾಜ್ಯಗಳಿಗೆ ಅನುಕೂಲವಾಗಲಿದೆ. ಈ ಕುರಿತು ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ನೀರಾವರಿ ಮಂತ್ರಿಗಳನ್ನು ಕಾವೇರಿ ಕ್ರಿಯಾ ಸಮಿತಿ ನಿಯೋಗದಿಂದ ಭೇಟಿ ಮಾಡಿ, ಮೇಕೆದಾಟು ಯೋಜನೆಯ ನಿರ್ಮಾಣಕ್ಕೆ ಅನುಮತಿ ಕೊಡಿಸುವಂತೆ ಮನವಿ ಮಾಡುತ್ತೇವೆ ಎಂದರು.
ಪ್ರಧಾನ ಮಂತ್ರಿಗಳು ಮೇಕೆದಾಟು ವಿಚಾರವಾಗಿ ಮಧ್ಯಸ್ಥಿಕೆ ವಹಿಸಿ, ಮೇಕೆದಾಟುವಿನಲ್ಲಿ ಅಣೆಕಟ್ಟೆ ಕಟ್ಟಲು ಅವಕಾಶ ಕೊಡಿಸಬೇಕು. ಕಾವೇರಿ ಹುಟ್ಟುವುದು ರಾಜ್ಯದ ಕೊಡಗಿನಲ್ಲಿ, ಇಲ್ಲಿ ಹುಟ್ಟುವ ನೀರು ರಾಜ್ಯಕ್ಕೆ ಸಲ್ಲಬೇಕು. ನೀರು ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಅಣೆಕಟ್ಟು ಕಟ್ಟುವ ಉದ್ದೇಶ ಇದೆ. ಇದರಿಂದ ತಮಿಳುನಾಡಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.
1974ರ ಕಾವೇರಿ ನೀರಿನ ಒಪ್ಪಂದವನ್ನು ಮರು ಪರಿಶೀಲನೆ ಮಾಡಬೇಕು. ರಾಜಕೀಯ ಪಕ್ಷಗಳು ಕಿತ್ತಾಟದಿಂದ ರಾಜ್ಯದಲ್ಲಿ ಕಾವೇರಿ ವಿವಾದ ಇಂದಿಗೂ ಮುಂದುವರೆದಿದೆ. ಆದರೆ, ತಮಿಳುನಾಡಿನಲ್ಲಿ ಜಲ, ನೆಲ, ಭಾಷೆಯ ವಿಷಯ ಬಂದಾಗ ಪಕ್ಷಭೇದ ಮರೆತು, ಎಲ್ಲ ಪಕ್ಷದವರೂ ಒಂದಾಗುತ್ತಾರೆ. ಆದರೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ಇದನ್ನು ಬಿಟ್ಟು ಪಕ್ಷಾತೀತವಾಗಿ ಮೋದಿಯವರನ್ನು ಭೇಟಿ ಮಾಡಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನಲ್ಲಿ ಯಾವುದೇ ಸರ್ಕಾರ ಬಂದರೂ, ಕಾವೇರಿ ನೀರಿನ ವಿಚಾರವಾಗಿ ಧ್ವನಿ ಎತ್ತುತ್ತಿವೆ. ಅದೇ ರೀತಿ ನೂತನ ಸಿಎಂ ಜೋಸೆಫ್ ವಿಜಯ್ ಅವರು ಮೇಕೆದಾಟು ವಿಚಾರವಾಗಿ ಧ್ವನಿ ಎತ್ತಿದ್ದಾರೆ ಎಂದರು.
ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ, ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ ಅವರು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಮೇಕೆದಾಟು ಯೋಜನೆ ಕೈ ಬಿಡುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ವಿಜಯ್ ಅವರು ಮೇಕೆದಾಟು ಯೋಜನೆಯ ವಿಚಾರವನ್ನು ಸರಿಯಾಗಿ ಅರಿಯಲಿ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಆರಂಭಿಸುವಂತೆ ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಯೋಜನೆಯಿಂದ ರೈತರಿಗೆ ಹಾಗೂ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆ ಕೈ ಬಿಟ್ಟರೆ, ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮಗೋಷ್ಟಿಯಲ್ಲಿ ನಟಿ ಶುಭರಕ್ಷ, ಕಾವೇರಿ ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕಾರ್ಯದರ್ಶಿ ಮೆಲ್ಲಹಳ್ಳಿ ಮಹದೇವಸ್ವಾಮಿ, ಎಂ. ಜೆ. ಸುರೇಶ್ಗೌಡ, ರೈತ ಶಿವಕುಮಾರ್, ರವೀಶ್, ಹನುಮಂತೇಗೌಡ, ಸ್ವಾಮಿಗೌಡ ಇದ್ದರು.

























