
ಸಂಜೆವಾಣಿ ವಾರ್ತೆ
ಕೊಟ್ಟೂರು: ಜೂನ್ 11: ಕೊಟ್ಟೂರು ತಾಲೂಕು ಆಡಳಿತದ ವತಿಯಿಂದ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ತಹಸಿಲ್ದಾರ್ ಜಿಕೆ ಅಮರೀಶ್ ಅಧ್ಯಕ್ಷತೆಯಲ್ಲಿ ಡೊನೇಷನ್ ಹಾವಳಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಕರೆದಿದ್ದ ಸಭೆಯಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರುಗಳು ಮಾನವೀಯ ನೆಲೆಗಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಸೂಲಿ ಮಾಡುತ್ತಿರುವ ಶುಲ್ಕವನ್ನು ಕಡಿಮೆ ಮಾಡುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಕೀಲರಾದ ಹನುಮಂತಪ್ಪನವರು ಕೊಟ್ಟೂರು ತಾಲೂಕು ಡಾಕ್ಟರ್ ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ಪ್ರದೇಶವಾಗಿದ್ದು ಬಹಳಷ್ಟು ಜನರು ಮಧ್ಯಮ ವರ್ಗದವರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಆದ್ದರಿಂದ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಶಿಕ್ಷಣವನ್ನು ನೀಡುವಂತೆ ಮನವಿ ಮಾಡಿದರು.
ರೈತ ಸಂಘಟನೆಯ ಮುಖಂಡರಾದ ಜಯಪ್ರಕಾಶ್ ನಾಯ್ಕ್ ರವರು ಮಾತನಾಡಿ ಖಾಸಗಿ ಶಾಲೆ ಕಾಲೇಜುಗಳಲ್ಲಿ ವಸೂಲಿ ಮಾಡುತ್ತಿರುವ ಡೆವಲಪ್ಮೆಂಟ್ ಫೀಸ್ ಅನ್ನು ಕೂಡಲೆ ರದ್ದು ಮಾಡುವಂತೆ ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಡಿ ಯಾರ್ ಮಲ್ಲಿಕಾರ್ಜುನ್ ಮಾತನಾಡಿ ಖಾಸಗಿ ಶಾಲಾ ಕಾಲೇಜುಗಳು ನಿರ್ಧಾರ ಮಾಡಿರುವ ದರವನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ನಾಮಫಲಕದಲ್ಲಿ ನಮೂದಿಸುವಂತೆ ಆಗ್ರಹಿಸಿದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಬದ್ದಿದುರುಗೇಶ್ ರವರು ಹೋರಾಟವನ್ನು ಮಾಡಿಯೇ ಎಲ್ಲವನ್ನು ಪಡೆಯಬೇಕು ಆದರೆ ಶಿಕ್ಷಣವು ಅದರ ವ್ಯಾಪ್ತಿಯಲ್ಲಿ ಬರುವುದಿಲ್ಲ ಆದ್ದರಿಂದ ಮಾನವೀಯತೆ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳು ಮುನ್ನಡೆಯಬೇಕು ಎಂದು ತಿಳಿಸಿದರು ಜಿಲ್ಲಾ ಡಿಎಸ್ಎಸ್ ಸಂಚಾಲಕರಾದ ಬದ್ದಿ ಮರಿಸ್ವಾಮಿ ಮಾತನಾಡಿ ಕೊಟ್ಟೂರು ಪಟ್ಟಣವು ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಹೆಸರನ್ನು ಮಾಡುತ್ತಿದ್ದು ಇಂತಹ ಪಟ್ಟಣದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಶಿಕ್ಷಣ ಪಡೆದು ತಮ್ಮ ಜೀವನದಲ್ಲಿ ಒಳ್ಳೆಯ ಹುದ್ದೆಯನ್ನು ಪಡೆಯಲು ಸಹಕಾರಿಯದ ಶಿಕ್ಷಣ ಸಂಸ್ಥೆಗಳು ಸ್ಥಳೀಯ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು.
ಹಾಗೂ ಯಾವುದೇ ಶಾಲೆ ಕಾಲೇಜುಗಳಲ್ಲಿ ಈ ಹಿಂದೆ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದು ನಂತರ ಒಂದು ತಿಂಗಳ ನಂತರ ಆ ಶಾಲೆ ಅಥವಾ ಕಾಲೇಜು ತಮಗೆ ಸರಿಹೊಂದದೆ ಇದ್ದಾಗ ತಾವು ಕಟ್ಟಿರುವ ಶುಲ್ಕವನ್ನು ವಾಪಾಸ್ ನೀಡದೆ ಸತಾಯಿಸಿರುವುದು ನಮ್ಮ ಗಮನಕ್ಕೆ ಅನೇಕ ಬಾರಿ ಬಂದಿದೆ ಆದ್ದರಿಂದ ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು. ಹಿರಿಯ ಪತ್ರಕರ್ತರಾದ ಉಜ್ಜಿನಿ ರುದ್ರಪ್ಪನವರು ಮಾತನಾಡಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡುತ್ತಿರುವ ಇಂದು ಕಾಲೇಜಿನ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಕೂಡಲೇ ಪಟ್ಟಣ ಪಂಚಾಯಿತಿಯವರು ತೆರಿಗೆಯನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಮತ್ತು ಇಂದು ಆಡಳಿತ ಮಂಡಳಿಯವರು ಸರಿಯಾದ ಸಮಯಕ್ಕೆಶುಲ್ಕ ಕಟ್ಟದೇ ಇರುವ ವಿದ್ಯಾರ್ಥಿಗಳನ್ನು ರಾತ್ರೋರಾತ್ರಿ ಹೊರಗೆ ಹಾಕಿರುವುದನ್ನು ನೆನೆಸಿಕೊಂಡರೆ ಭಯವಾಗುತ್ತದೆ ಆ ವಿದ್ಯಾರ್ಥಿಗಳು ಆ ಸಮಯದಲ್ಲಿ ದೇವಸ್ಥಾನ,ಬಸ್ ಸ್ಟಾಂಡ್ ಮತ್ತು ತಮ್ಮ ಸ್ನೇಹಿತರ ರೂಮುಗಳಲ್ಲಿ ಆಶ್ರಯ ಪಡೆದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ ಇಂಥ ಘಟನೆಗಳನ್ನು ನೆನೆಸಿಕೊಂಡರೆ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಅಮಾನವೀಯ ಘಟನೆಗಳು ಈಗಲೂ ನಡೆಯುತ್ತಿರುವುದು ದುರದೃಷ್ಟಕರ ಕೂಡಲೇ ಇಂದು ಆಡಳಿತಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಚ್ಚರಿಕೆ:
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರ್ ರವರು ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆದುಕೊಳ್ಳಬೇಕು ಶಾಲಾ ಕಟ್ಟಡದ ವಂತಿಕೆ ಹೆಸರಿನಲ್ಲಿ ಬೇರೆ ರೀತಿಯ ಡೊನೇಶನ್ ಅನ್ನು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವ ಹಾಗಿಲ್ಲ ಮತ್ತು ತಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ ತಾವುಗಳು ಅನುಮತಿ ಪಡೆದುಕೊಂಡಿರುವ ಪಠ್ಯಕ್ರಮವನ್ನು ನಾಮಫಲಕದಲ್ಲಿ ಹಾಕಿಕೊಳ್ಳಬೇಕು ಹಾಗೂ ರಾಜ್ಯದ ಪಠ್ಯಕ್ರಮದ ಅನುಮತಿಯನ್ನು ಪಡೆದುಕೊಂಡು ಸುಖಾಸುಮ್ಮನೆ ನಮ್ಮ ಶಾಲೆಯಲ್ಲಿ ಸಿಬಿಎಸ್ಸಿ ಪಠ್ಯಕ್ರಮವನ್ನು ಬೋಧನೆ ಮಾಡುವುದಾಗಿ ಸುಳ್ಳು ಮಾಹಿತಿ ನೀಡುತ್ತಿರುವ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟದ ಪರವಾಗಿ ಮಾತನಾಡಿದ ಇಂದು ಕಾಲೇಜಿನ ಮುಖ್ಯಸ್ಥರಾದ ಬದ್ರಿ ಯವರು ಯಾವುದೇ ಶಾಲಾ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆದು ಒಂದು ತಿಂಗಳ ಒಳಗಾಗಿ ಬೇರೆ ಶಾಲಾ-ಕಾಲೇಜುಗಳಿಗೆ ಪ್ರವೇಶವನ್ನು ಬಯಸುವ ವಿದ್ಯಾರ್ಥಿಗಳ ಪೂರ್ಣ ಶುಲ್ಕವನ್ನು ವಾಪಸ್ ನೀಡುವುದಾಗಿ ತಿಳಿಸಿದರು. ನಂತರ ಮಾತನಾಡಿದ ಗುರುದೇವ ಸಂಸ್ಥೆಯ ಮುಖ್ಯಸ್ಥರಾದ ಶ್ರೀಧರ ಶೆಟ್ಟಿ ರವರು ಇನ್ನೆರಡು ದಿನಗಳಲ್ಲಿ ಎಲ್ಲಾ ಶಾಲೆಯ ಮುಖ್ಯಸ್ಥರು ಚರ್ಚಿಸಿ ಶಾಲಾ ಕಾಲೇಜುಗಳಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಕಡಿಮೆ ಮಾಡುವುದಾಗಿ ಸಭೆಗೆ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಿಪಿಐ ದುರುಗಪ್ಪ, ಪಿಎಸ್ಐ ಶ್ರೀಮತಿ ಗೀತಾಂಜಲಿ ಶಿಂದೆ, ರೈತ ಸಂಘದ ನಾಯಕರುಗಳಾದ ಭರಮಣ್ಣ, ಜಂಬೂರು ಮರಳು ಸಿದ್ದಪ್ಪ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಶಿವರಾಜ್ ಬಣಕಾರ್, ಪಿ ಚಂದ್ರಶೇಖರ್, ಕೊಲ್ಲಾರಪ್ಪ, ಕೊಚಾಲಿ ಮಂಜುನಾಥ್, ಹರಾಳು ದೊಡ್ಡಬಸಪ್ಪ, ಬಹುತೇಕ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
























