Home ಸಿನೆಮಾ ‘ಮಹಾನ್’ ಚಿತ್ರದಲ್ಲಿ ವರ್ಷ ಬೊಳ್ಳಮ್ಮ ದುರ್ಗಾ

‘ಮಹಾನ್’ ಚಿತ್ರದಲ್ಲಿ ವರ್ಷ ಬೊಳ್ಳಮ್ಮ ದುರ್ಗಾ

ಫಸ್ಟ್ ಲುಕ್ ಅನಾವರಣ

ದಕ್ಷಿಣ ಭಾರತದ ಜನಪ್ರಿಯ ನಟಿ ವರ್ಷ ಬೊಳ್ಳಮ್ಮ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ‘ಮಹಾನ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆಕಾಶ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ವರ್ಷ ಬೊಳ್ಳಮ್ಮ ‘ದುರ್ಗಾ’ ಎಂಬ ಪ್ರಗತಿಪರ ರೈತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಮೊದಲ ನೋಟ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಕೊಡಗು ಮೂಲದ ವರ್ಷ ಬೊಳ್ಳಮ್ಮ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಕನ್ನಡದ ಮೊದಲ ಸಿನಿಮಾದಲ್ಲೇ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಪ್ರಕಾಶ್ ಎಸ್. ಬೂದೂರು, ‘ಮಹಾನ್’ ಕೇವಲ ಮನರಂಜನೆಯ ಚಿತ್ರವಲ್ಲ; ದೇಶದ ಅನ್ನದಾತರ ಪರಿಶ್ರಮ, ಹೋರಾಟ ಮತ್ತು ಬದುಕಿಗೆ ಗೌರವ ಸಲ್ಲಿಸುವ ಪ್ರಯತ್ನವಾಗಿದೆ ಎಂದು ಹೇಳಿದರು. ಕಥೆಯ ಭಾವವನ್ನು ಪರಿಣಾಮಕಾರಿಯಾಗಿ ತೆರೆಗೆ ತರಲು ಅನುಭವಿ ಕಲಾವಿದರು ಹಾಗೂ ತಂತ್ರಜ್ಞರನ್ನು ಒಗ್ಗೂಡಿಸಲಾಗಿದೆ. ಶಿವರಾಜಕುಮಾರ್, ವಿಜಯ್ ರಾಘವೇಂದ್ರ, ರಾಧಿಕಾ ಚೇತನ್, ಕಿರಣ್ ಶ್ರೀನಿವಾಸ್, ದೇವರಾಜ್, ರಂಗಾಯಣ ರಘು, ಮಿತ್ರ, ಶರತ್ ಲೋಹಿತಾಶ್ವ, ಅವಿನಾಶ್, ನಮ್ರತಾ ಗೌಡ ಮತ್ತು ರಮೇಶ್ ಇಂದಿರ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಪಿ.ಸಿ. ಶೇಖರ್ ಅವರ ಪ್ರಕಾರ, ದುರ್ಗಾ ಪಾತ್ರ ಇಂದಿನ ಹೊಸ ತಲೆಮಾರಿನ ವಿದ್ಯಾವಂತ ಹಾಗೂ ಆತ್ಮವಿಶ್ವಾಸಿ ರೈತೆಯ ಪ್ರತೀಕವಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಪ್ರಕೃತಿಯ ಸಮತೋಲನದ ಮೂಲಕ ಸುಸ್ಥಿರ ಕೃಷಿಯ ಸಂದೇಶವನ್ನು ಈ ಪಾತ್ರ ಸಾರಲಿದ್ದು, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಯುವಜನರನ್ನು ಕೃಷಿಯತ್ತ ಸೆಳೆಯುವ ಆಶಯವನ್ನು ಹೊಂದಿದೆ.

ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸಿರುವ ಸಂತಸ ಹಂಚಿಕೊಂಡ ವರ್ಷ ಬೊಳ್ಳಮ್ಮ, “ತಾಯ್ನಾಡಿನ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಶಿವರಾಜಕುಮಾರ್ ಹಾಗೂ ವಿಜಯ್ ರಾಘವೇಂದ್ರ ಅವರಂತಹ ಹಿರಿಯ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ‘ಮಹಾನ್’ ಚಿತ್ರದಲ್ಲಿನ ದುರ್ಗಾ ಪಾತ್ರ ನನ್ನ ವೃತ್ತಿಜೀವನದ ವಿಶೇಷ ಪಾತ್ರಗಳಲ್ಲಿ ಒಂದಾಗಲಿದೆ. ಈ ಅವಕಾಶ ನೀಡಿದ ನಿರ್ದೇಶಕ ಪಿ.ಸಿ. ಶೇಖರ್ ಹಾಗೂ ಆಕಾಶ ಪಿಕ್ಚರ್ಸ್ ಸಂಸ್ಥೆಗೆ ನಾನು ಚಿರಋಣಿ,” ಎಂದು ಹೇಳಿದರು.