Home ಜಿಲ್ಲೆ ಭೂ ಫಲವತ್ತತೆಗೆ ಸಾಂಪ್ರದಾಯಿಕ ಕೃಷಿ ಅಗತ್ಯ – ಖೇತ್ ಬಚಾವೋ ಅಭಿಯಾನ

ಭೂ ಫಲವತ್ತತೆಗೆ ಸಾಂಪ್ರದಾಯಿಕ ಕೃಷಿ ಅಗತ್ಯ – ಖೇತ್ ಬಚಾವೋ ಅಭಿಯಾನ

ಕುರುಗೋಡು, ಜೂ.15: ‘ರೈತರನ್ನು ಸಾಂಪ್ರದಾಯಿಕ ಕೃಷಿಯತ್ತ ಕೊಂಡೊಯ್ಯುವ ಉದ್ದೇಶದಿಂದ ದೇಶವ್ಯಾಪಿ ಖೇತ್ ಬಚಾವೋ ಅಭಿಯಾನ ಹಮ್ಮಿಕೊಂಡಿದೆ’ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಎಸ್.ಎನ್. ಮಂಜುನಾಥ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಖೇತ್ ಬಚಾವೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೃಷಿ ಇಲಾಖೆ, ಕೃಷಿಗೆ ಸಂಬಂಧಿಸಿದ ಸಂಘ, ಸಂಸ್ಥೆಗಳು, ಕೃಷಿ ವಿಜ್ಞಾನಿಗಳು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಅಗತ್ಯಕ್ಕಿಂತ ಅಧಿಕ ಪ್ರಮಾಣದ ಕ್ರಿಮಿನಾಶಕ, ರಸಗೊಬ್ಬರ ಬಳಕೆಯಿಂದ ಭೂಮಿ ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಮಣ್ಣಿನ ಫಲವತ್ತತೆ ರಕ್ಷಣೆ, ಸುಸ್ಥಿರ ಕೃಷಿ ಪದ್ಧತಿ ಕುರಿತು ಅರಿವು ಮೂಡಿಸಲಾಗುವುದು’ ಎಂದರು.

ಸಹಾಯಕ ಕೃಷಿ ನಿರ್ದೇಶಕ ಗರ್ಜೆಪ್ಪ ಮಾತನಾಡಿ, ‘ಜೂನ್ 1 ರಿಂದ ಆರಂಭಗೊಂಡಿರುವ ಅಭಿಯಾನ ಜೂನ್ 30ಕ್ಕೆ ಕೊನೆಗೊಳ್ಳಲಿದೆ’ ಎಂದು ತಿಳಿಸಿದರು.

‘ಅಭಿಯಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಇಲಾಖೆ ಮೂಲಕ ಜಾರಿಗೆ ತಂದಿರುವ ಪಿ.ಎಂ.ಕಿಸಾನ್, ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಭಾಗ್ಯ, ಕೃಷಿ ಸಿಂಚಾಯಿ, ಧನ ಧಾನ್ಯ ಯೋಜನೆ, ಮಣ್ಣು ಆರೋಗ್ಯ ಚೀಟಿ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ರೈತರಲ್ಲಿ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಲಿದ್ದಾರೆ. ರೈತರು ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಸಲಹೆ ನೀಡಲಾಗುವುದು. ಕ್ರಿಮಿನಾಶಕ ಮತ್ತು ರಸಗೊಬ್ಬರ ಬಳಕೆಯ ಬದಲು ಸಾವಯವ ಗೊಬ್ಬರ ಬಳಕೆಯಿಂದಾಗುವ ಪ್ರಯೋಜನಗಳು, ಗುಣಮಟ್ಟದ ಬೀಜಗಳ ಆಯ್ಕೆ ಕುರಿತು ಮಾಹಿತಿ ನೀಡುವ ಮೂಲಕ ಹಂತ ಹಂತವಾಗಿ ಪರಿಸರ ಸ್ನೇಹಿ, ಸಾಂಪ್ರದಾಯಿಕ, ಸಾವಯವ ನೈಸರ್ಗಿಕ ಕೃಷಿಕಡೆಗೆ ರೈತರನ್ನು ಪರಿವರ್ತಿಸುವ ಕಾರ್ಯ ಅಭಿಯಾನದ ಮೂಲಕ ಮಾಡಲಾಗುವುದು ಎಂದರು.

ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ರವಿ, ನವೀನ್ ಕುಮಾರ್, ಕೃಷ್ಣಮೂರ್ತಿ, ಕೃಷಿ ಅಧಿಕಾರಿ ದೇವರಾಜ್, ಸಿಬ್ಬಂದಿ ಕವಿತಾ ಕುಮಾರಿ, ರೇಣುಕಾರಾಧ್ಯ, ಹನುಮಂತ ರೆಡ್ಡಿ ಮತ್ತು ಮಲ್ಲಪ್ಪ ಇದ್ದರು.