Home ಸುದ್ದಿ ರಾಷ್ಟ್ರೀಯ ಭೀಕರ ಟರ್ಬುಲೆನ್ಸ್‍ಗೆ ಸಿಲುಕಿದ ಏರ್ ಇಂಡಿಯಾ ವಿಮಾನ

ಭೀಕರ ಟರ್ಬುಲೆನ್ಸ್‍ಗೆ ಸಿಲುಕಿದ ಏರ್ ಇಂಡಿಯಾ ವಿಮಾನ

ನವದೆಹಲಿ,ಆ.11- ಥೈಲ್ಯಾಂಡ್‍ನ ಫುಕೆಟ್‍ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಆಗಸ್ಟ್ 4 ರಂದು ಭೀಕರ ತಾಂತ್ರಿಕ ದೋಷ ಹಾಗೂ ತೀವ್ರ ಗಾಳಿಯ ಒತ್ತಡಕ್ಕೆ (ಟರ್ಬುಲೆನ್ಸ್) ಸಿಲುಕಿದ್ದು, ಕನಿಷ್ಠ 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಏರ್‍ಬಸ್ ಂ320 ವಿಮಾನವು ನಡುಬಾನಿನಲ್ಲಿ ಹಾರಾಟ ನಡೆಸುತ್ತಿದ್ದಾಗ, ದಿಢೀರನೆ ಸುಮಾರು 300 ಅಡಿಗಳಷ್ಟು ಕೆಳಕ್ಕೆ ಕುಸಿದಿದೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೀಟುಗಳಿಂದ ಎಸೆಲ್ಪಟ್ಟು ಸೀಲಿಂಗ್‍ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಮಾನವು ಟರ್ಬುಲೆನ್ಸ್‍ಗೆ ಸಿಲುಕುವ ಮುನ್ನವೇ ಹಲವು ಗಂಭೀರ ತಾಂತ್ರಿಕ ದೋಷಗಳನ್ನು ಎದುರಿಸಿತ್ತು ಎಂಬುದು ಈಗ ತನಿಖೆಯಿಂದ ತಿಳಿದುಬಂದಿದೆ: ಹಾರಾಟದ ಮಧ್ಯದಲ್ಲಿ ಆಟೋ ಪೈಲಟ್ ವ್ಯವಸ್ಥೆ ದಿಢೀರನೆ ಕಾರ್ಯನಿರ್ವಹಿಸುವುದು ನಿಂತುಹೋಗಿತ್ತು. ವಿಮಾನದ ನಿಯಂತ್ರಣಕ್ಕೆ ಅತ್ಯಗತ್ಯವಾದ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿತ್ತು. ಸಹ-ಚಾಲಕ ವಿಮಾನದ ಹಸ್ತಚಾಲಿತ ನಿಯಂತ್ರಣ ತೆಗೆದುಕೊಂಡ ತಕ್ಷಣ ‘ಫ್ರಂಟ್ ಕಂಟ್ರೋಲ್ ಸ್ಟಾಲ್ ವಾರ್ನಿಂಗ್’ ಸೂಚನೆಗಳು ಕಾಣಿಸಿಕೊಂಡಿದ್ದವು.

ಲ್ಯಾಂಡಿಂಗ್ ನಂತರ ನಡೆಸಿದ ಪ್ರಾಥಮಿಕ ವೈದ್ಯಕೀಯ ತಪಾಸಣೆಯಲ್ಲಿ ವಿಮಾನದ ಮುಖ್ಯ ಪೈಲಟ್ ಮದ್ಯ ಅಥವಾ ಮಾದಕದ್ರವ್ಯ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸಾಮಾನ್ಯ ಜ್ವರ ಅಥವಾ ಶೀತಕ್ಕೆ ತೆಗೆದುಕೊಳ್ಳುವ ಔಷಧಿಗಳಿಂದಲೂ ಇಂತಹ ರಿಸಲ್ಟ್ ಬರಲು ಸಾಧ್ಯವಿರುವುದರಿಂದ, ಅಂತಿಮ ದೃಢೀಕರಣ ವರದಿಗಾಗಿ ಕಾಯಲಾಗುತ್ತಿದೆ.

ಈ ಗಂಭೀರ ಘಟನೆಯನ್ನು ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆ ಆರಂಭಿಸಿದೆ. ವಿಮಾನ ತಯಾರಿಕಾ ಸಂಸ್ಥೆಯಾದ ಏರ್‍ಬಸ್‍ನ ತಜ್ಞರ ತಂಡ ಹಾಗೂ ಫ್ರಾನ್ಸ್ ನ ಪೌರ ವಿಮಾನಯಾನ ಭದ್ರತಾ ಸಂಸ್ಥೆಯ ತನಿಖಾಧಿಕಾರಿಗಳು ತನಿಖೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದಾರೆ.

ಘಟನೆಯ ಸಮಯದಲ್ಲಿ ವಿಮಾನದಲ್ಲಿ 3 ಶಿಶುಗಳು ಸೇರಿದಂತೆ 137 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದರು. ಅದೃಷ್ಟವಶಾತ್ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.