Home ಸಿನೆಮಾ ಪ್ಯಾನ್ ವರ್ಲ್ಡ್ ‘ರಾಮಾಯಣ’ ದರ್ಶನ

ಪ್ಯಾನ್ ವರ್ಲ್ಡ್ ‘ರಾಮಾಯಣ’ ದರ್ಶನ

ಜುಲೈ 24ರಂದು ಟ್ರೈಲರ್ ಬಿಡುಗಡೆ

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ರಾಮಾಯಣ’ ಚಿತ್ರದ ಮೊದಲ ಜಾಗತಿಕ ಟ್ರೇಲರ್‌ ಜುಲೈ 24ರಂದು ಬಿಡುಗಡೆಯಾಗಲಿದೆ. ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದು, ಬಿಡುಗಡೆಯ ಮುನ್ನವೇ ದೇಶ-ವಿದೇಶಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಟ್ರೇಲರ್ ಬಿಡುಗಡೆಗೆ ಮುನ್ನ ನವದೆಹಲಿಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದ ಮೂಲಕ ಚಿತ್ರದ ಮಹತ್ವಾಕಾಂಕ್ಷೆಯ ಯೋಜನೆಗೆ ಅಧಿಕೃತ ಚಾಲನೆ ನೀಡಲಾಯಿತು.

ಜುಲೈ 18ರಂದು ನವದೆಹಲಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯಾದ ರಾಮಾಯಣವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಐತಿಹಾಸಿಕ ಪ್ರಯಾಣಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಈ ಪಯಣದ ಆರಂಭವನ್ನು ‘ಪ್ರಥಮ ಸಂಕಲ್ಪ’ ಎಂದು ಕರೆಯಲಾಗಿದ್ದು, ಭಾರತೀಯ ಸಂಪ್ರದಾಯದಂತೆ ಮಹತ್ಕಾರ್ಯವೊಂದಕ್ಕೆ ಕೈಹಾಕುವ ಮುನ್ನ ಕೈಗೊಳ್ಳುವ ದೃಢ ನಿರ್ಧಾರದ ಸಂಕೇತವಾಗಿ ರೂಪಿಸಲಾಗಿದೆ. ಜುಲೈ 24ರಂದು ನಡೆಯಲಿರುವ ಚಿತ್ರದ ಜಾಗತಿಕ ಟ್ರೇಲರ್ ಬಿಡುಗಡೆಗೂ ಮುನ್ನ ರಾಜಧಾನಿಯಲ್ಲಿ ನಡೆದ ವಿಶೇಷ ಪ್ರದರ್ಶನವು ರಾಮಾಯಣದ ಭವ್ಯತೆಗೆ ಸಾಕ್ಷಿಯಾಯಿತು.

500ಕ್ಕೂ ಹೆಚ್ಚು ಶಾಲೆಗಳಿಗೆ ರಾಮಾಯಣ ಕಾರ್ಯಕ್ರಮ

‘Ramayana Schools Programme’ ಮೂಲಕ ದೇಶದ 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಮಾಯಣದ ಮೌಲ್ಯಗಳನ್ನು ಪರಿಚಯಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳು ‘ಪ್ರಥಮ ಸಂಕಲ್ಪ’ ಸಮಾರಂಭದಲ್ಲಿ ಭಾಗವಹಿಸಿ ವಿಶೇಷ ಮೆರುಗು ತಂದರು. ಜೊತೆಗೆ ದೇಶದ 20 ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಟ್ರೇಲರ್‌ನ ವಿಶೇಷ ಮುನ್ನೋಟ ಪ್ರದರ್ಶಿಸಲಾಗುತ್ತಿದೆ.

ದೊಡ್ಡ ತಾರಾಬಳಗದ ಸಂಗಮ

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಭಿನಯಿಸಿದ್ದಾರೆ. ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್, ರಕುಲ್ ಪ್ರೀತ್ ಸಿಂಗ್, ರವಿ ದುಬೆ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಸನ್ನಿ ಡಿಯೋಲ್ ಹನುಮಂತನ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ.

ಭಾರತದ ಕಥೆಯನ್ನು ವಿಶ್ವಕ್ಕೆ

ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, ರಾಮಾಯಣವು ಕೇವಲ ಪುರಾಣವಲ್ಲ; ಭಾರತೀಯರ ಜೀವನ ಮೌಲ್ಯಗಳ ಪ್ರತೀಕವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಈ ಮಹಾಕಾವ್ಯವನ್ನು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.

ನಿರ್ದೇಶಕ ನಿತೇಶ್ ತಿವಾರಿ, ರಾಮಾಯಣದ ಭಾವನಾತ್ಮಕ ಆಳ ಮತ್ತು ಸಾರ್ವತ್ರಿಕ ಮೌಲ್ಯಗಳನ್ನು ಉಳಿಸಿಕೊಂಡು ಪ್ರತಿಯೊಂದು ದೃಶ್ಯವನ್ನೂ ಅತ್ಯಂತ ಗೌರವ ಮತ್ತು ಪ್ರಾಮಾಣಿಕತೆಯಿಂದ ರೂಪಿಸಲಾಗಿದೆ ಎಂದು ತಿಳಿಸಿದರು.

ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಜುಲೈ 24ರಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಮುಂದಿನ ವರ್ಷದ ದೀಪಾವಳಿ ಸಂದರ್ಭದಲ್ಲಿ ಚಿತ್ರವನ್ನು ವಿಶ್ವದಾದ್ಯಂತ ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ.