
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.17: ಎಸ್.ಯು.ಸಿ.ಐ (ಸಿ) ಪಕ್ಷದ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ವಿರೋಧಿಸಿ ಕುರುಗೋಡು ಪಟ್ಟಣದಲ್ಲಿಂದು ಪ್ರತಿಭಟನೆ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು
ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಲೀಟರಿಗೆ ತಲಾ ರೂ. 3ರಂತೆ ಏರಿಸಿರುವ ಕ್ರಮವನ್ನು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ.
ಇಂಧನ ಬೆಲೆ ಏರಿಕೆಯು ಬೇರೆಲ್ಲ ಅವಶ್ಯಕ ವಸ್ತುಗಳನ್ನು ದುಬಾರಿಗೊಳಿಸಿ, ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಅಮೆರಿಕಾ – ಇಸ್ರೇಲ್ ಕೂಟವು ಇರಾನ್ ಮೇಲೆ ನಡೆಸುತ್ತಿರುವ ಯುದ್ಧವೇ ಈ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಬಿಜೆಪಿ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಅವಕಾಶವನ್ನು ಅಮೆರಿಕಾದ ಒತ್ತಡಕ್ಕೆ ಮಣಿದು ಕೈಚೆಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ಗಳೇ ಇವೆ.
ಹಾಗಾಗಿ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಗಳನ್ನು ಕಡಿತಗೊಳಿಸಬೇಕು, ತೈಲ ಕಂಪನಿಗಳ ಲಾಭಕ್ಕಾಗಿ, ದೇಶದೊಳಗೆಯೇ ಶುದ್ಧೀಕರಣ ಮಾಡಿ ಉತ್ಪಾದಿಸುವ ಪೆಟ್ರೋಲ್ ಮತ್ತು ಡೀಸೆಲ್ ಗಳಿಗೆ ಜಾಗತಿಕ ದರಗಳನ್ನು ನಿಗದಿ ಮಾಡುವ ನೀತಿಯನ್ನು ಕೈಬಿಡಬೇಕು. ಈ ಯುದ್ಧವನ್ನು ನಿಲ್ಲಿಸಿ, ಬೇರೆ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸದಂತೆ ಅಮೆರಿಕಾದ ಸಾಮ್ರಾಜ್ಯಶಾಹಿಗಳ ಮೇಲೆ ಭಾರತವು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು
ಈ ಸಂಧರ್ಭದಲ್ಲಿ ಕುರುಗೋಡು ಸ್ಥಳೀಯ ಸಮಿತಿ ಕಾರ್ಯದರ್ಶಿ ಗೋವಿಂದ್, ಸಮಿತಿ ಸದಸ್ಯರಾದ ಗುರಳ್ಳಿ ರಾಜ , ಮಣಿಕಂಠ ಕಾರ್ಮಿಕರಾದ ಅಂಬರೀಷ್, ಕುರಿ ಮಲ್ಲಯ್ಯ, ವೀರೇಶ್ , ತಿಪ್ಪೇಸ್ವಾಮಿ, ಬಸವರಾಜ್, ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು

























