Home ಜಿಲ್ಲೆ ಪುಸ್ತಕ, ದಿನಪತ್ರಿಕೆಗಳಿಂದ ಹೃದಯವಂತಿಕೆ; ರವೀಂದ್ರ ಭಟ್

ಪುಸ್ತಕ, ದಿನಪತ್ರಿಕೆಗಳಿಂದ ಹೃದಯವಂತಿಕೆ; ರವೀಂದ್ರ ಭಟ್

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.17: ವಿದ್ಯಾರ್ಥಿಗಳು ಪುಸ್ತಕ ಹಾಗೂ ದಿನ ಪತ್ರಿಕೆಗಳನ್ನು ಓದುವುದರಿಂದ ಅವರಲ್ಲಿ ಹೃದಯವಂತಿಕೆ ಹೆಚ್ಚುತ್ತದೆ ಎಂದು ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಹೇಳಿದರು.

ಇಲ್ಲಿಯ ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಇಂಗ್ಲೀಷ್, ಕನ್ನಡ ಹಾಗೂ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದಿಂದ ಆಯೋಜಿಸಲಾಗಿದ್ದ ಪ್ರೊ ಶಿರಗಾನಹಳ್ಳಿ ಶಾಂತನಾಯ್ಕ ಅವರ ರಚಿತ ‘ನಡೆದಷ್ಟು ದಾರಿ ದೂರ’ ಎಂಬ ಕೃತಿ  ಬಿಡುಗಡೆ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್, ಟಿವಿ ಹಾವಳಿಯಿಂದಾಗಿ ಪುಸ್ತಕ, ಪತ್ರಿಕೆಯನ್ನು ಮಕ್ಕಳು ಇಂದು ಓದಲಾರದಂತಹ ಸ್ಥಿತಿಗೆ ತಲುಪಿದ್ದಾರೆ. ಪುಸ್ತಕ, ಪತ್ರಿಕೆಯನ್ನು ನೋಡುವ ನೆಪಮಾತ್ರಕ್ಕೆ ಕಣ್ಣಾಡಿಸುವ ಮನಸ್ಥಿತಿ ಹೊಂದಿದ್ದಾರೆ. ಸಮಾಜದಲ್ಲಿ ಇಂದು ಹೋರಾಟಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಜಾಗೃತವಾಗಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಆಚಾರ-ವಿಚಾರಗಳು ಹಾಗೆಯೇ ಇವೆ.ಸಮಾಜದಲ್ಲಿ ನಮಗಿಂತ ಕೆಳಸ್ಥಿತಿಯಲ್ಲಿ ಬದುಕುವವರ ಏಳ್ಗೆಗೆ ನಮ್ಮ ಪಾತ್ರ ಎಷ್ಟಿದೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಬಳ್ಳಾರಿಯ ಚಾರ್ಟೆಡ್ ಅಕೌಂಟಂಟ್ ಪನ್ನರಾಜ ಅವರು  ಮಾತನಾಡಿ, ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ, ಆರ್ಥಿಕ ಸ್ಥಿತಿಗತಿಗಳಲ್ಲಿ ಅಸಮಾನತೆ ಇದೆ. ನಿಮ್ಮ ಹಕ್ಕುಗಳಿಗೆ ಧ್ವನಿ ಎತ್ತದೆ ಹೋದರೆ ಪ್ರಜಾಪ್ರಭುತ್ವ ಜೀವವನ್ನು ಕಳೆದುಕೊಳ್ಳುತ್ತದೆ. ಕೆಕೆಆರ್‍ಡಿಬಿ ಹಾಗೂ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ನೀಡುವ 371 ಜೆ ನಲ್ಲಿ ಬಳ್ಳಾರಿ ಹೆಸರನ್ನು ಕೈ ಬಿಟ್ಟಿರೋದಕ್ಕೆ ಹೋರಾಟ ಮಾಡಿದ್ದನ್ನು ಸ್ಮರಿಸಿದ್ದರು.

ನಾಟಕಕಾರರು ಹಾಗೂ ಸಹ ಪ್ರಾಧ್ಯಾಪಕರು ವಿಜಯನಗರ ಕಾಲೇಜು ಬೆಂಗಳೂರು ಡಾ. ಬೇಲೂರು ರಘುನಂದನ್ ಮಾತನಾಡಿ, ‘ನಡೆದಷ್ಟು ದಾರಿ ದೂರ’  ಕನ್ನಡದಲ್ಲಿ ಛಾಯಾ ಚಿತ್ರಗಳನ್ನು ಒಳಗೊಂಡಂತಹ ವಿಶಿಷ್ಟವಾದ ಕೃತಿಯಾಗಿದೆ.  198 ಛಾಯಾಚಿತ್ರಗಳನ್ನು ಒಳಗೊಂಡ ಕೃತಿಯು ಬರಹಗಾರ ತನ್ನ ಬದುಕಿನ ಅನೇಕ ಛಾಯಾಚಿತ್ರಗಳನ್ನು ಉಳಿಸಿಕೊಂಡು ಬಂದಿರುವುದು ಸವಾಲಾಗಿದೆ. ಈ ಕೃತಿಯಲ್ಲಿ ಸಂಗ್ರಹಿಸಲಾಗದ ಫೋಟೋಗಳು ಕಲ್ಪನೆಯನ್ನು ಒದಗಿಸುತ್ತವೆ.

ಕೃತಿಯಲ್ಲಿ ಸಾಂಸ್ಕೃತಿಕ ಪುಟಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರಲಾಗಿದೆ. ಬರಹಗಾರನ ತನ್ನ ಬದುಕಿನ ದಾರಿಯನ್ನು ಕುರಿತು ಹೇಳುತ್ತ ಅನುಭವಗಳನ್ನು ನಕಲು ಮಾಡದೆ ಅವುಗಳನ್ನು ನೆನಪು ಮಾಡಿಕೊಳ್ಳುವುದು ತುಂಬಾ ಸುಂದರವಾಗಿದೆ. ನಮ್ಮ ಅನುಭವಗಳು ಲೋಕಕಲ್ಯಾಣಕ್ಕೆ ಜ್ಞಾನವಾಗಬೇಕು ಎಂದು ಕೃತಿ ಕುರಿತು ಸುದೀರ್ಘವಾಗಿ ವಿವರಿಸಿ ಪರಿಚಯಿಸಿದರು.

ವಿವಿಯ ಕುಲಸಚಿವರಾದ ಪ್ರೊ ಲೋಕೇಶ ವಿ ಮಾತನಾಡಿ, ‘ನಡೆದಷ್ಟು ದಾರಿ ದೂರ’ ವನ್ನು ಗಣಿತಶಾಸ್ತ್ರದಲ್ಲಿ ಇನ್ಪಿನಿಟಿ ಎಂದು ಹೇಳುತ್ತೇವೆ. ಚಿತ್ರಗಳಗಳ ಮೂಲಕ ನಡೆದು ಬಂದ ದಾರಿಯನ್ನು ಹೇಳುವುದು ವೈಶಿಷ್ಟ್ಯವಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಅದಕ್ಕೆ ಕೃತಿಗಾರರು ಚಿತ್ರದ ಮೂಲಕ ಕೃತಿಯನ್ನು ರಚಿಸಿರಬಹುದು ಎಂದು ಹೇಳಿದರು.

ಪ್ರೊ. ಶಾಂತನಾಯ್ಕ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಫೋಟೋಗಳಿರುತ್ತವೆ. ಅವುಗಳ ಸಂಗ್ರಹಣೆಯಿಂದಾಗಿ ನೆನಪುಗಳು ಕೃತಿಯಾಗಿ ಬಂದಿದೆ. ಪುಸ್ತಕದಲ್ಲಿರುವ ವಿದ್ಯೆ ಹಾಗೂ ಸಮಾಜದಲ್ಲಿರುವ ಸಂಗತಿಗಳು ಬೇರೆ ಬೇರೆಯಾಗಿರುತ್ತದೆ. ಸಮಾಜದಲ್ಲಿನ ಹಲವಾರು ಸಂಘರ್ಷಗಳು ಪಾಠವನ್ನು ಕಲಿಸುತ್ತವೆ. ಸತ್ಯವನ್ನು ನೇರವಾಗಿ ಹೇಳದೆ ಸಾಹಿತ್ಯಿಕ ಆಯಾಮದಲ್ಲಿ ಹೇಳಲಾಗಿದೆ ಎಂದರು.

ಕಲಾನಿಕಾಯದ ಡೀನರಾದ ಪ್ರೊ|| ರಾಬರ್ಟ್ ಜೋಸ್ ಕೊನೆಯಲ್ಲಿ ಮಾತನಾಡಿದರು. ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯಾದ ಸ್ಫೂರ್ತಿ ಕೆ ಜಿ  ಅವರು ವೇದಿಕೆಯಲ್ಲಿದ್ದರು.

ಡಾ. ಸಂತೋಷ ಜಿ ಕೆ ಅತಿಥಿಗಳನ್ನು ಸ್ವಾಗತಿಸಿದರು.  ಡಾ. ಅಣ್ಣಾಜಿ ಕೃಷ್ಣರೆಡ್ಡಿ ನಿರೂಪಿಸಿದರು. ಡಾ ವಾತ್ಸಲ್ಯ ವಂದಿಸಿದರು.

ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.