
ಕ್ರೈಸ್ಟ್ ಚರ್ಚ್, ನ.೨೯: ಧ್ರುವ್ ಜುರೆಲ್ (೮೮) ಅವರ ಮಹತ್ವದ ಅರ್ಧ ಶತಕದ ಹೊರತಾಗಿಯೂ ಭಾರತ ತಂಡ ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆಗೆ ಗುರಿಯಾಗಿದೆ.
ಹ್ಯಾಗ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ, ೬ ವಿಕೆಟ್ ಗೆ ೧೧೬ ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಟೀಮ್ ಇಂಡಿಯಾ, ೨೪೬ ರನ್ ಗಳಿಗೆ ಇನಿಂಗ್ಸ್ ಪೂರ್ಣಗೊಳಿಸಿತು.
ಎರಡನೇ ದಿನದಾಟದಂತ್ಯಕ್ಕೆ ೭ ರನ್ ಗಳಿಸಿದ್ದ ಜುರೆಲ್, ದಿಟ್ಟ ಹೋರಾಟ ನಡೆಸಿ ೮೮ ರನ್ ಗಳಿಸಿದರೆ, ಇತರ ಆಟಗಾರರು ವೇಗಿ ಕೈಲ್ ಜೆಮಿಸನ್ ಸೇರಿದಂತೆ ಆತಿಥೇಯ ತಂಡದ ಮಾರಕ ದಾಳಿಗೆ ನಿರುತ್ತರಗೊಂಡರು. ಜೆಮಿಸನ್ ೪ ವಿಕೆಟ್ ಉರುಳಿಸಿದರೆ, ಮ್ಯಾಟ್ ಹೆನ್ರಿ , ನಥಾನ್ ಸ್ಮಿತ್ ಮತ್ತು ಜಾಕೋಬ್ ಡಫಿ ತಲಾ ಎರಡು ವಿಕೆಟ್ ಕಬಳಿಸಿದರು.
ಬಳಿಕ ೧೧೦ ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ ದಿನದಾಟದ ಮುಕ್ತಾಯಕ್ಕೆ ೪೬ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೩೩ ರನ್ ಕಲೆಹಾಕಿದ್ದು, ಒಟ್ಟಾರೆಯ ಮುನ್ನಡೆಯನ್ನು ೨೪೩ ರನ್ ಗಳ ಭಾರಿ ಮುನ್ನಡೆ ಪಡೆದಿದೆ.
ಪಂದ್ಯ ಮುಕ್ತಾಯಕ್ಕೆ ಇನ್ನೂ ಎರಡು ದಿನಗಳು ಬಾಕಿ ಇದು ನ್ಯೂಜಿಲೆಂಡ್ ಇನ್ನಷ್ಟು ರನ್ ಗಳಿಸಿ ಪ್ರವಾಸಿ ತಂಡದ ಮೇಲೆ ಒತ್ತಡ ಹೇರುವ ನಿರೀಕ್ಷೆಯಲ್ಲಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಪುಟಿದೇಳಲು ವಿಫಲಗೊಂಡರೆ ಸೋಲುವ ಸಾಧ್ಯತೆ ಹೆಚ್ಚಾಗಿದೆ.
೧೭ ವರ್ಷಗಳ ನಂತರ ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಹಾಗೂ ಸರಣಿ ಗೆಲ್ಲುವ ಹಂಬಲದ ಜತೆಗೆ ಮುಂಬರುವ ಡಬ್ಲ್ಯೂಟಿಸಿ ಫೈನಲ್ ಪ್ರವೇಶವನ್ನು ಜೀವಂತವಾಗಿಟ್ಟುಕೊಳ್ಳುವ ಗುರಿ ಹೊಂದಿದ್ದ ಟೀಮ್ ಇಂಡಿಯಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಗೊಂಡಿದೆ.
ನ್ಯೂಜಿಲೆಂಡ್ ಕಾನ್ವೆ, ರಚಿನ್ ಆಸರೆ
ನಾಯಕ ಟಾಮ್ ಲೇಥಮ್ ಮತ್ತು ಹೆನ್ರಿ ನಿಕೋಲ್ಸ್ ಅವರನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದ ಭಾರತ, ನಂತರ ಇತರ ಲಾಭ ಪಡೆಯಲು ವಿಫಲಗೊಂಡಿತು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಡೆವೊನ್ ಕಾನ್ವೆ (೫೧) ಮತ್ತು ರಚಿನ್ ರವೀಂದ್ರ (ಅಜೇಯ ೪೬) ಪ್ರವಾಸಿ ತಂಡದ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿದರು. ಸದ್ಯ ಡೇರಿಲ್ ಮಿಚೆಲ್ ಜತೆ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಒಂದು ವೇಳೆ ಭಾರತೀಯ ಬೌಲರ್ ಗಳು ಸೋಮವಾರ ಪರಿಣಾಮಕಾರಿ ಬೌಲಿಂಗ್ ನಡೆಸಿದರೆ, ಆತಿಥೇಯ ತಂಡವನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿ ಗೆಲುವಿಗೆ ಹೋರಾಟ ನಡೆಸುವ ಅವಕಾಶವಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ : ೩೫೬ ಮತ್ತು ಎರಡನೇ ಇನಿಂಗ್ಸ್ ೪೬ ಇನಿಂಗ್ಸ್ ಗಳಲ್ಲಿ ೩ ವಿಕೆಟ್ ಗೆ ೧೩೩ (ರಚಿನ್ ರವೀಂದ್ರ ಅಜೇಯ ೪೬, ಡೆವೊನ್ ಕಾನ್ವೆ ೫೧, ಹೆನ್ರಿ ನಿಕೋಲ್ಸ್ ೨೨; ಜಸ್ ಪ್ರಿತ್ ಬುಮ್ರಾ ೪೩ಕ್ಕೆ ೨).
ಭಾರತ: ಮೊದಲ ಇನಿಂಗ್ಸ್ ೮೬.೧ ಓವರ್ ಗಳಲ್ಲಿ ೨೪೬ (ಧ್ರುವ್ ಜುರೆಲ್ ೮೮, ಆಕಾಶ್ ದೀಪ್ ೨೯, ರಾಹುಲ್ ೨೩, ರಿಷಭ್ ಪಂತ್ ೨೩, ಪಡಿಕ್ಕಲ್ ೨೧ ; ಜಸ್ ಪ್ರಿತ್ ಬುಮ್ರಾ ೩೪ಕ್ಕೆ ೨).




















