Home ಜಿಲ್ಲೆ ಮಂಗಳೂರು ಜೂನ್ ೧೨ ರಿಂದ ಮೂರು ದಿನ ಸುಳ್ಯದಲ್ಲಿ ಹಲಸು, ಮಾವು ಮೇಳ ನಡೆಸಲು ನಿರ್ಧಾರ

ಜೂನ್ ೧೨ ರಿಂದ ಮೂರು ದಿನ ಸುಳ್ಯದಲ್ಲಿ ಹಲಸು, ಮಾವು ಮೇಳ ನಡೆಸಲು ನಿರ್ಧಾರ

ಸುಳ್ಯ:ಅಡಿಕೆ ಮತ್ತು ರಬ್ಬರಿಗೆ ಹೆಸರುವಾಸಿಯಾಗಿರುವ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಜೂನ್ ೧೨ ರಿಂದ ೧೪ರ ವರೆಗೆ ಹಲಸು ಮತ್ತು ಮಾವು ಮೇಳವನ್ನು ಮೂರು ದಿನಗಳ ಕಾಲ ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರ ಕೇರ್ಪಳದ ವಠಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಹಲಸು ಮತ್ತು ಮಾವು ಮೇಳ ನಡೆಸಿ ಸುಳ್ಯ ತಾಲೂಕಿನ ಮತ್ತು ಆಸಕ್ತ ಕೃಷಿಕರಿಗೆ ಹಲಸಿನ ಮತ್ತು ಮಾವಿನ ಮೌಲ್ಯವರ್ಧಿತ ಉಪ ಉತ್ಪನ್ನಗಳನ್ನು ತಯಾರಿಸುವುದರ ಬಗ್ಗೆ ಮಾಹಿತಿ ನೀಡಲು ಮಂಗಳವಾರ ಸುಳ್ಯದ ಎ.ಪಿ.ಎಂ.ಸಿ.ಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಕಣ್ಕಲ್ ವೀರಪ್ಪ ಗೌಡರು ವಹಿಸಿದ್ದರು. ಪ್ರಣವ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಆರ್.ಪ್ರಸಾದ್, ಸುಳ್ಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ., ಸುಳ್ಯ ಎ.ಪಿ.ಎಂ.ಸಿ. ಕಾರ್ಯದರ್ಶಿ ಎಸ್.ರವೀಂದ್ರ, ಹಲಸು ಮಾವು ಮೇಳದಲ್ಲಿ ಪ್ರದರ್ಶನ ಮಳಿಗೆಗಳ ವ್ಯವಸ್ಥೆ ಮಾಡುವ ಟೀಂ ಸಂಚಾಲಕ ರಾಜೇಶ್ ಪ್ರಭು ಉಪಸ್ಥಿತರಿದ್ದರು.
ಟೀಂ ಉಬಾರ್ ಉಪ್ಪಿನಂಗಡಿ, ಸುಳ್ಯ ರೈತ ಉತ್ಪಾದಕ ಕಂಪನಿ , ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ., ತಾಲೂಕು ಆಡಳಿತ, ತೋಟಗಾರಿಕೆ, ಕೃಷಿ ಮತ್ತಿತರ ಇಲಾಖೆಗಳು, ತಾಲೂಕಿನ ಸಹಕಾರ ಸಂಘಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಹಲಸು ಮತ್ತು ಮಾವು ಮೇಳ ನಡೆಸಲು ನಿರ್ಧರಿಸಲಾಗಿದೆ.
ಮೇಳದಲ್ಲಿ ವಿವಿಧ ತಳಿಯ ಹಲಸು ಮತ್ತು ಮಾವು ಸಂಬಂಧಿತ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ, ಮಾರಾಟ, ಆಹಾರ, ವಿಚಾರ ಸಂಕಿರಣಗಳು, ವಿವಿಧ ಸ್ಪರ್ಧೆಗಳು , ಸುಳ್ಯ ತಾಲೂಕಿನ ಮಾವು – ಹಲಸು ಕೃಷಿ ಸಾಧಕರ ಗುರುತಿಸುವಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಮೇಳದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಮತ್ತಷ್ಟು ಅನುಭವಿ ಗಣ್ಯರನ್ನು ಸಮಿತಿಗಳಿಗೆ ಸೇರಿಸಿಕೊಂಡು ಮೇ.೧೫ ರ ಒಳಗಾಗಿ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಎಂ.ಡಿ.ವಿಜಯಕುಮಾರ್, ಅರಬಣ್ಣ ಪೂಜಾರಿ, ತಿಮ್ಮಯ್ಯ ಪಿಂಡಿಮನೆ, ಭಾಸ್ಕರ ನಾಯರ್, ಜಯರಾಮ ಮುಂಡೋಳಿಮೂಲೆ, ಶ್ರೀಶ ಕುಮಾರ್, ಮಧುರಾ ಜಗದೀಶ್, ರಾಮಕೃಷ್ಣ ಬೆಳ್ಳಾರೆ, ರಾಕೇಶ್ ಪ್ರಭು ಉಪ್ಪಿನಂಗಡಿ, ರಂಜಿತ್ ಅಡ್ತಲೆ, ಹರೀಶ್ ಕೊಡಿಯಾಲ, ಯಶ್ವಿತ್ ಕಾಳಮ್ಮನೆ ಮತ್ತು ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.