
ಪುತ್ತೂರು: ಸಾಹಸವನ್ನೇ ಬದುಕಿನ ಹೊಟ್ಟೆಪಾಡಿನ ವೃತ್ತಿಯಾಗಿಸಿಕೊಂಡು ಜನರನ್ನು ರಂಜಿಸುವ ಜಂಬೋ ಸರ್ಕಸ್ ಕಲಾವಿದರಿಗೆ ಕನ್ನಡದ ಗೌರವ ನೀಡುವ ವಿನೂತನ ಕಾರ್ಯಕ್ರಮವೊಂದು ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ನಡೆಯಿತು. ಕಳೆದ ಕೆಲ ಸಮಯದಿಂದ ದೇವರಮಾರು ಗದ್ದೆಯಲ್ಲಿ ಜಂಬೊ ಸರ್ಕಸ್ ಜನಮಾನಸವನ್ನು ರಂಜಿಸುತ್ತಿದ್ದಾರೆ. ಆಫ್ರಿಕಾ, ನೇಪಾಳ, ಮಣಿಪುರದ ಈ ಸಾಹಸ ಕಲಾವಿದರಿಗೆ ಕನ್ನಡದ ಕಲಾಗೌರವ ನೀಡಲಾಯಿತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮದಲ್ಲಿ ವೀಕ್ಷಕರ ಮೈ ರೋಮಾಂಚನಗೊಳ್ಳುವಂತೆ ಮಾಡುವ ೪೦ ಸಾಹಸ ಕಲಾವಿದರು ಹಾಗೂ ಈ ಕಲಾವಿದರ ಹಿಂದೆ ಶ್ರಮ ಪಡುವ ೬೦ ಮಂದಿಯನ್ನು ಏಕಕಾಲದಲ್ಲಿ ಸನ್ಮಾನಿಸಲಾಯಿತು. ಕೇರಳ ಮೂಲದ ಹಿನ್ನಲೆಯ ಹೊಂದಿರುವ ಜಂಬೋ ಸರ್ಕಸ್ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನ ನೀಡುವ ಸಂದರ್ಭ ಕನ್ನಡಭಾಷೆಗೆ ನೀಡುವ ಗೌರವದ ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸರ್ಕಸ್ ಪ್ರದರ್ಶನದ ವೇಳೆ ರಂಗಸ್ಥಳದಲ್ಲಿ ಕನ್ನಡ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತದೆ. ಪೇಕ್ಷಕರ ರಂಜನೆಗಾಗಿ ಕನ್ನಡ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರವೇಶದ್ವಾರದಲ್ಲಿ ಕನ್ನಡದಲ್ಲಿಯೇ ನಾಮಫಲಕ ಹಾಕಲಾಗುತ್ತಿದೆ. ಆ ಮೂಲಕ ಕನ್ನಡ ನಾಡು ನುಡಿಗೆ ಜಂಬೋ ಸರ್ಕಸ್ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಶ್ಲಾಘಿಸಿದರು.
ಕನ್ನಡದ ಪೇಟ, ಕನ್ನಡದ ಶಾಲು ಹೊದಿಸಿ ಕಲಾವಿದರನ್ನು ಗೌರವಿಸಲಾಯಿತು. ಈ ಸಂದರ್ಭ ಮುಳಿಯ ಜುವೆಲ್ಲರ್ಸ್ ವತಿಯಿಂದ ಅಶ್ವಿನಿಕೃಷ್ಣ ಮುಳಿಯ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿದರು. ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಮಾತನಾಡಿ, ಯುವಜನತೆ ಮಾದಕ ವ್ಯಸನ ಎಂಬ ಸಾಮಾಜಿಕ ಪಿಡುಗಿನಿಂದ ದೂರವಾಗಬೇಕು. ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಸಮಾಜವನ್ನು ಮಾದಕವ್ಯಸನ ಮುಕ್ತಗೊಳಿಸಲು ಜನರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ. ಪುರಂದರ ಭಟ್ ಅವರು ಮಾತನಾಡಿ, ಸರ್ಕಸ್ ಕೇವಲ ಕಣ್ಣಿಗೆ ನೀಡುವ ಮನರಂಜನೆಯಲ್ಲ. ಅದು ದಿನನಿತ್ಯದ ಕಠಿಣ ತರಬೇತಿ, ಕಟ್ಟುನಿಟ್ಟಿನ ಶಿಸ್ತು, ಅಪಾರ ಪರಿಶ್ರಮ ಮತ್ತು ಉನ್ನತ ಮಟ್ಟದ ಕಲೆಯ ಅದ್ಭುತ ಸಂಗಮವಾಗಿದೆ. ಸಾರ್ವಜನಿಕರನ್ನು ರಂಜಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಪ್ರದರ್ಶಿಸುವ ಈ ಕಲಾವಿದರ ಸೇವೆ ಇಡೀ ಕಲಾ ಜಗತ್ತಿಗೆ ಅನನ್ಯವಾದುದಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಂಬೋ ಸರ್ಕಸ್ನ ಪ್ರಬಂಧಕರಾದ ಸುರೇಶ್ ಕೃತಜ್ಞತೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆ ಶಂಕರಿ ಶರ್ಮಾ ಅವರು ಸ್ವಾಗತಿಸಿದರು. ರೋಟರಿ ಅಧ್ಯಕ್ಷ ಕುಸುಮರಾಜ್ ವಂದಿಸಿದರು. ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಭಿಷ್ ಉಪಸ್ಥಿತರಿದ್ದರು.
























