Home ಜಿಲ್ಲೆ ಕಲಬುರಗಿ ಮಾದಕ ವಸ್ತುಗಳ ವಿರುದ್ಧ ಸಮರಕ್ಕೆ ಕೈ ಜೋಡಿಸಿ: ಪೊಲೀಸ್ ಕಮೀಶನರ್ ಡಾ.ಶರಣಪ್ಪ

ಮಾದಕ ವಸ್ತುಗಳ ವಿರುದ್ಧ ಸಮರಕ್ಕೆ ಕೈ ಜೋಡಿಸಿ: ಪೊಲೀಸ್ ಕಮೀಶನರ್ ಡಾ.ಶರಣಪ್ಪ

ಕಲಬುರಗಿ,ಜೂ.26:ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ವಿರುದ್ಧ ಸಮೂಹ ಹೋರಾಟ ಅಗತ್ಯವಾಗಿದ್ದು, ಯುವಜನರು ಈ ದುಶ್ಚಟದಿಂದ ದೂರವಿರುವುದಷ್ಟೇ ಅಲ್ಲ, ಸುತ್ತಮುತ್ತ ಇಂತಹ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೆÇಲೀಸರಿಗೆ ಮಾಹಿತಿ ನೀಡಬೇಕು ಎಂದು ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಕರೆ ನೀಡಿದರು.
ಅಂತರರಾಷ್ಟ್ರೀಯ ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಕಲಬುರಗಿ ನಗರ ಪೆÇಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಸಂಜೆ ನಗರದ ಎಸ್ವಿಪಿ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತು ಸರಬರಾಜು ಮಾಡುವವರ ವಿರುದ್ಧ ಮಾತ್ರವಲ್ಲದೆ, ಅವುಗಳನ್ನು ಸೇವಿಸುವವರ ಮೇಲೂ ಎನ್ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು 2025ರ ಜನವರಿಯಿಂದ ಇದುವರೆಗೆ ಕಲಬುರಗಿ ನಗರದಲ್ಲಿ ಮಾದಕ ವಸ್ತು ಸೇವಕರು ಮತ್ತು ಪೆಡ್ಲರ್‍ಗಳ ವಿರುದ್ಧ ಸುಮಾರು 600 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಮಾದಕ ವ್ಯಸನಕ್ಕೆ ಒಳಗಾದವರು ಮತ್ತು ಮಾದಕ ವಸ್ತು ಜಾಲದಲ್ಲಿ ತೊಡಗಿರುವವರನ್ನು ಗುರುತಿಸಿ ಅವರನ್ನು ಮತ್ತೆ ಸಾಮಾನ್ಯ ಬದುಕಿನತ್ತ ತರಲು ‘ಸನ್ಮಿತ್ರ’ ಎಂಬ ವಿಶೇಷ ಉಪಕ್ರಮ ಆರಂಭಿಸಲಾಗಿದೆ ಎಂದು ಶರಣಪ್ಪ ಹೇಳಿದರು. ಈ ಯೋಜನೆಯಡಿ ಸಂಬಂಧಿತ ವ್ಯಕ್ತಿಗಳಿಗೆ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಅವರು ಸಂಪೂರ್ಣವಾಗಿ ಸುಧಾರಿಸುವವರೆಗೆ ನಿಗಾ ವಹಿಸಲಾಗುತ್ತಿದೆ. ಈ ಮೂಲಕ ಈಗಾಗಲೇ ಮಾದಕ ಜಾಲಕ್ಕೆ ಸಿಲುಕಿದ್ದ 150ಕ್ಕೂ ಹೆಚ್ಚು ಯುವಕರಲ್ಲಿ ಬದಲಾವಣೆಯ ಲಕ್ಷಣಗಳು ಕಂಡುಬಂದಿವೆ ಎಂದು ಅವರು ಹೇಳಿದರು.
18ರಿಂದ 25 ವರ್ಷದ ವಯಸ್ಸು ಜೀವನ ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಯುವಕರು ತಮ್ಮ ಗುರಿ ಮತ್ತು ಭವಿಷ್ಯದ ಕಡೆ ಗಮನಹರಿಸಬೇಕು, ಕೆಟ್ಟ ಚಟಗಳಿಗೆ ಬಲಿಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು. ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು, ಸಮಾಜಸೇವಕರು ಮತ್ತು ಸಾರ್ವಜನಿಕರ ಪಾತ್ರ ಅತ್ಯಂತ ಮುಖ್ಯ ಎಂದು ಅವರು ತಿಳಿಸಿದರು.
ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ, ವಸತಿ ಪ್ರದೇಶಗಳಲ್ಲಿ ಅಥವಾ ಬೇರೆಡೆ ಮಾದಕ ವಸ್ತು ಸೇವನೆ ಅಥವಾ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು. ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದ ಅವರು, ಸಾರ್ವಜನಿಕರಿಂದ ದೊರೆಯುತ್ತಿರುವ ಮಾಹಿತಿಯ ಆಧಾರದ ಮೇಲೆ ಪೆÇಲೀಸರು ಗಸ್ತು ತೀವ್ರಗೊಳಿಸಿದ್ದು, ಮಾದಕ ವಸ್ತು ಸರಬರಾಜಿನಲ್ಲಿ ತೊಡಗಿರುವವರ ವಿರುದ್ಧ ವಿಶೇಷ ಕಾನೂನುಗಳಡಿ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಹಾಗೂ ಸ್ಪೈನ್ ಸರ್ಜನ್ ಡಾ. ವಿನಯಸಾಗರ ಶರ್ಮಾ, ಮಾದಕ ವ್ಯಸನವು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ಹಾಳುಮಾಡುತ್ತದೆ ಎಂದು ಎಚ್ಚರಿಸಿದರು. ‘ಒಮ್ಮೆ ಸೇವಿಸಿ ನೋಡೋಣ’ ಎನ್ನುವ ಮನೋಭಾವವೂ ಅಪಾಯಕಾರಿಯಾಗಿದ್ದು, ಮಾದಕ ವಸ್ತುಗಳಿಂದ ಸಿಗುವ ಕ್ಷಣಿಕ ಉಲ್ಲಾಸದ ಹಿಂದೆ ಹೋಗುವ ಅಭ್ಯಾಸ ಕೊನೆಗೆ ವ್ಯಕ್ತಿಯನ್ನು ಸಂಪೂರ್ಣವಾಗಿ ವ್ಯಸನದ ಬಲೆಗೆ ತಳ್ಳುತ್ತದೆ ಎಂದು ಹೇಳಿದರು.
ಮಾದಕ ವ್ಯಸನದಿಂದ ವ್ಯಕ್ತಿಯ ವಿವೇಕ ಕುಂಠಿತಗೊಳ್ಳುವುದರ ಜೊತೆಗೆ ಕುಟುಂಬ ಮತ್ತು ಸಮಾಜದ ಮೇಲೂ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದರು. ಯುವಕರು ದೃಢವಾಗಿ ಮಾದಕ ವಸ್ತುಗಳಿಗೆ ‘ಬೇಡ’ ಎಂದು ಹೇಳಬೇಕು ಹಾಗೂ ತಮ್ಮ ಸುತ್ತಮುತ್ತ ಇಂತಹ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಮಾದಕ ವಸ್ತು ದುರ್ಬಳಕೆ ಮತ್ತು ಅಕ್ರಮ ಸಾಗಣೆಯ ಹೆಚ್ಚುತ್ತಿರುವ ಅಪಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪೆÇಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.