Home ಸುದ್ದಿ ರಾಷ್ಟ್ರೀಯ ಕುರುಡುಮಲೆ ಗಣಪನ ಸನ್ನಿಧಿಯಲ್ಲಿ ಕೈ’ ನಾಯಕರ ವಿಶೇಷ ಸಂಕಲ್ಪ

ಕುರುಡುಮಲೆ ಗಣಪನ ಸನ್ನಿಧಿಯಲ್ಲಿ ಕೈ’ ನಾಯಕರ ವಿಶೇಷ ಸಂಕಲ್ಪ

ಮುಳಬಾಗಿಲು.ಸೆ2: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಐತಿಹಾಸಿಕ ಕುರುಡುಮಲೆ ಶ್ರೀ ವಿನಾಯಕಸ್ವಾಮಿ ಸನ್ನಿಧಿ ಸುದ್ದಿಯ ಕೇಂದ್ರಬಿಂದುವಾಗಿದೆ. ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗ ಕುರುಡುಮಲೆ ಶ್ರೀ ವಿನಾಯಕಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಅವರ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದ್ದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಡಿ.ಕೆ. ಶಿವಕುಮಾರ್ ಹಾಗೂ ಅವರ ಕುಟುಂಬದವರ ಗೋತ್ರ ಮತ್ತು ಹೆಸರುಗಳನ್ನು ಸಂಕಲ್ಪದಲ್ಲಿ ಉಚ್ಚರಿಸಿ ವಿಶೇಷ ಅರ್ಚನೆ ನೆರವೇರಿಸಲಾಯಿತು. ಬಳಿಕ ಶ್ರೀ ವಿನಾಯಕಸ್ವಾಮಿಗೆ ಮಹಾಮಂಗಳಾರತಿ ಬೆಳಗಿ, ರಾಜ್ಯದ ಸುಭಿಕ್ಷತೆ, ಸರ್ಕಾರದ ಯಶಸ್ಸು ಹಾಗೂ ಯಾವುದೇ ವಿಘ್ನಗಳು ಎದುರಾಗದಂತೆ ಪ್ರಾರ್ಥಿಸಲಾಯಿತು. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಪ್ರಮುಖ ರಾಜಕೀಯ ಪ್ರವಾಸಕ್ಕೆ ದೇವಮೂಲೆ ಎಂದೇ ಪ್ರಸಿದ್ಧಿ ಪಡೆದಿರುವ ಕುರುಡುಮಲೆಯ ಶ್ರೀ ವಿನಾಯಕಸ್ವಾಮಿ ಸನ್ನಿಧಿಯಿಂದ ಚಾಲನೆ ನೀಡಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಈ ಹಿನ್ನೆಲೆಯಲ್ಲಿ ಅಂದು ಮಾಡಿಕೊಂಡಿದ್ದ ಹರಕೆಯನ್ನು ಶ್ರೀ ವಿನಾಯಕನ ಸನ್ನಿಧಿಯಲ್ಲಿ ತೀರಿಸುವ ಸಂಕಲ್ಪ ಮಾಡಲಾಗಿದೆ ಎಂದು ಆಪ್ತ ಬಳಗ ತಿಳಿಸಿದೆ. ಪೂಜೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಂಟ್ರೋಲ್ ರೂಮ್ ಸದಸ್ಯರು,ಕುರುಡುಮಲೆ ಶ್ರೀ ವಿನಾಯಕನಿಗೆ ಮಾಡಿಕೊಂಡಿರುವ ಹರಕೆಯನ್ನು ತೀರಿಸಲು ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸದಸ್ಯರು ಆಗಮಿಸುವ ಉದ್ದೇಶವಿದೆ. ದೇವಾಲಯದ ಅರ್ಚಕರೊಂದಿಗೆ ಸೂಕ್ತ ದಿನಾಂಕದ ಕುರಿತು ಚರ್ಚಿಸಲಾಗುತ್ತದೆ. ಪಕ್ಷದ ಶಿಷ್ಟಾಚಾರದಂತೆ ಈ ಭಾಗದ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಅಭಿಪ್ರಾಯ ಪಡೆದು ಅಂತಿಮ ದಿನಾಂಕ ನಿಗದಿಪಡಿಸಲಾಗುತ್ತದೆ” ಎಂದು ತಿಳಿಸಿದರು.


ರಾಜ್ಯದಲ್ಲಿ ಜನಪರ ಆಡಳಿತ ಸುಗಮವಾಗಿ ಸಾಗಲಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಲಿ ಹಾಗೂ ಆಡಳಿತಕ್ಕೆ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ಶ್ರೀ ವಿನಾಯಕನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಿ,ಗಾಂಧಿ, ಕಿರಣ್ ವಸಂತಕವಿತಾ, ವಿಜಯಾ, ಜಡಿ.ವನಿತಾ, ಗಾಯತ್ರಪಾತರ್ , ಶುಭವೇಣುಗೋಪಾಲ್ ಹಾಗೂ ಜೈಶಾಂಭವಿ ಸೇರಿದಂತೆ ಕೆಪಿಸಿಸಿ ಕಂಟ್ರೋಲ್ ರೂಮ್ ಭಾಗವಹಿಸಿ ಶ್ರೀ ವಿನಾಯಕಸ್ವಾಮಿಯ ದರ್ಶನ ಪಡೆದರು.