Home ಜಿಲ್ಲೆ ಎಸ್ಸಿ, ಎಸ್ಟಿ ಕುಂದು ಕೊರತೆಗಳ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ: ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿಕೆ

ಎಸ್ಸಿ, ಎಸ್ಟಿ ಕುಂದು ಕೊರತೆಗಳ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ: ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿಕೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಮೇ.20 ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಹಿತರಕ್ಷಣೆ ಹಾಗೂ ಅವರ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಆಯೋಗ ಬದ್ಧವಾಗಿದ್ದು, ಅರ್ಹರಲ್ಲದವರು ನಕಲಿ ಜಾತಿ ಪ್ರಮಾಣಪತ್ರ ಪಡೆದು ಉದ್ಯೋಗ ಗಿಟ್ಟಿಸಿಕೊಂಡಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ಇಂತಹ 12 ನಕಲಿ ಪ್ರಮಾಣಪತ್ರಗಳನ್ನು ರದ್ದುಪಡಿಸಿ, ಅವರ ಉದ್ಯೋಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರಾದ ಡಾ: ಎಲ್.ಮೂರ್ತಿ ತಿಳಿಸಿದರು.

ಸ್ಥಳೀಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮುದಾಯದ ಮುಖಂಡರು, ಸಾರ್ವಜನಿಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಜರುಗಿದ ಮಹತ್ವದ ಕುಂದು ಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆ ನಂತರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಆಯೋಗದ ಅಧ್ಯಕ್ಷನಾಗಿ ಕಳೆದ ಆರೂವರೆ ತಿಂಗಳಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರವಾಸ ಕೈಗೊಂಡಿರುವ ಆಯೋಗಕ್ಕೆ ಇದು 16ನೇ ಜಿಲ್ಲೆಯಾಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರ ವೇತನಕ್ಕೆ ಸೂಚನೆ: ಜಿಲ್ಲೆಯ ಕೆಲವು ಪುರಸಭೆಗಳಲ್ಲಿ ಪೌರ ಕಾರ್ಮಿಕರಿಗೆ 11 ರಿಂದ 15 ತಿಂಗಳಾದರೂ ವೇತನ ಪಾವತಿಯಾಗದಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಸಾರ್ವಜನಿಕರ ಆರೋಗ್ಯ ಕಾಯುವ ಇವರ ಜೀವನದೊಂದಿಗೆ ಆಟವಾಡಬಾರದು. ಹೊರಗುತ್ತಿಗೆ ಪೌರಕಾರ್ಮಿಕರಿಗೂ ಕನಿಷ್ಠ 15,000 ದಿಂದ 16,000 ರೂ. ವೇತನವನ್ನು ಯಾವುದೇ ವಿಳಂಬವಿಲ್ಲದೆ ಚಾಚೂ ತಪ್ಪದೆ ಪಾವತಿಸಬೇಕು. ಹಾಗೂ ಪುರಸಭೆಗಳ ತೆರಿಗೆ ನಿಧಿಯಲ್ಲಿ ಇವರ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ರೂಪಿಸಬೇಕು ಎಂದು ಜಿಲ್ಲಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಅಲೆದಾಟಕ್ಕೆ ಬ್ರೇಕ್: ಕಂದಾಯ ಇಲಾಖೆಯಲ್ಲಿ ಪಾಣಿ ತಿದ್ದುಪಡಿ, ಖಾತೆ ಬದಲಾವಣೆ ಹಾಗೂ ಆಕಾರಬಂದ್ ಸರ್ವೆಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳಿರುವುದು ಗಮನಕ್ಕೆ ಬಂದಿದೆ. ದೂರದ ಊರುಗಳಿಂದ ಬರುವ ಜನರನ್ನು ಅಲೆದಾಡಿಸದಂತೆ ತಾಲೂಕು ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ಕಡ್ಡಾಯವಾಗಿ ಎಸ್ಸಿ, ಎಸ್ಟಿ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದು ನಿಯಮಿತವಾಗಿ ಸಭೆ ನಡೆಸಬೇಕು ಎಂದು ತಿಳಿಸಿದರು.

ಉದ್ಯೋಗಾವಕಾಶಕ್ಕೆ ಕ್ರಮ:  ಜಿಲ್ಲೆಯಲ್ಲಿ ಬೃಹತ್ ಕಂಪನಿಗಳು ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಇದರಲ್ಲಿ ಪರಿಶಿಷ್ಟ ಸಮುದಾಯಗಳ ಭೂಮಿಯೂ ಸೇರಿದೆ. ಭೂಮಿ ಕಳೆದುಕೊಂಡ ಹಾಗೂ ಜಮೀನು ರಹಿತ ಸಮುದಾಯದ ವಿದ್ಯಾವಂತ ಯುವಕ-ಯುವತಿಯರಿಗೆ ಆಯಾ ಕಂಪನಿಗಳಲ್ಲೇ ಉದ್ಯೋಗಾವಕಾಶ ಕಲ್ಪಿಸಲು ಮತ್ತು ಕಂಪನಿಗಳ ಸಿಎಸ್ಆರ್ (ಅSಖ) ನಿಧಿಯ ಹಣವನ್ನು ಈ ಸಮುದಾಯಗಳ ಅಭಿವೃದ್ಧಿಗೆ ಬಳಸಲು ಸರ್ಕಾರ ಮಟ್ಟದಲ್ಲಿ ನಿರ್ದೇಶನ ನೀಡಲಾಗುವುದು ಎಂದರು.

ನಿವೇಶನ ಭಾಗ್ಯ: ಹರಪನಹಳ್ಳಿ, ಕೂಡ್ಲಿಗಿ ಸೇರಿದಂತೆ ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲಿರುವ ಸ್ಲಂ ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮಳೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಈ ಭಾಗಗಳಲ್ಲಿ ಸೂಕ್ತ ಜಮೀನನ್ನು ಗುರುತಿಸಿ, ವಿಶೇಷ ಪ್ಯಾಕೇಜ್ ಮೂಲಕ ನಿವೇಶನ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ಮಕ್ಕಳ ಆರೋಗ್ಯ ತಪಾಸಣೆ: ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮತ್ತು ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯ, ಸ್ವಚ್ಛತೆ ಮತ್ತು ಗುಣಮಟ್ಟದ ಶಿಕ್ಷಣ ಕಡ್ಡಾಯವಾಗಿದೆ. 1 ರಿಂದ 12 ನೇ ತರಗತಿಯವರೆಗಿನ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೂಲಿ ಕಾರ್ಮಿಕರ ಮಕ್ಕಳಲ್ಲಿ ಕಂಡು ಬರುತ್ತಿರುವ ರಕ್ತಹೀನತೆ ಮತ್ತು ಶಿಶು ಮರಣ ಪ್ರಮಾಣ ತಡೆಗಟ್ಟಲು ಆರೋಗ್ಯ ಇಲಾಖೆ ನಿಯಮಿತ ತಪಾಸಣೆ ನಡೆಸಿ, ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡುವುದಾಗಿ ತಿಳಿಸಿದರು.

ನಾಮ ಫಲಕ ಅಳವಡಿಕೆಗೆ ಸೂಚನೆ: ಸರ್ಕಾರದ 31 ಇಲಾಖೆಗಳಿಗೆ ಒದಗಿಸಲಾಗುವ ಎಸ್ಸಿಪಿ, ಟಿಎಸ್ಪಿ ನಿಧಿಯ ಬಳಕೆಯಲ್ಲಿ ಪಾರದರ್ಶಕತೆ ಇರಬೇಕು. ಕೆಲವು ಕಡೆ ಕಾಮಗಾರಿಗಳ ‘ಮಿಕ್ಸಿಂಗ್’ ಆಗುತ್ತಿರುವ ದೂರುಗಳು ಬಂದಿರುವುದರಿಂದ, ಇದನ್ನು ತಡೆಗಟ್ಟಲು ಯಾವ ವರ್ಷದಲ್ಲಿ, ಯಾವ ಇಲಾಖೆಯಿಂದ, ಎಷ್ಟು ನಿಧಿಯಲ್ಲಿ ಕಾಮಗಾರಿ ನಡೆದಿದೆ ಎಂಬುದನ್ನು ಸಾರ್ವಜನಿಕರಿಗೆ ತೋರಿಸಲು ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸಬೇಕು ಎಂದು ಆದೇಶಿಸಲಾಗಿದೆ ಎಂದರು.

ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವಂತಿಲ್ಲ: ದೀರ್ಘ ಕಾಲದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಅಲೆಮಾರಿ ಮತ್ತು ಪರಿಶಿಷ್ಟ ಸಮುದಾಯಗಳ ಯಾವುದೇ ಕುಟುಂಬಗಳನ್ನು ಎಸ್ಐಟಿ ವರದಿ ಬರುವವರೆಗೂ ಒಕ್ಕಲೆಬ್ಬಿಸಬಾರದು ಎಂದು ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕನ್ಸರ್ವೇಟರ್ ಆಫ್ ಫಾರೆಸ್ಟ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಒಕ್ಕಲೆಬ್ಬಿಸಿದರೆ ಅವರಿಗೆ ಪರ್ಯಾಯವಾಗಿ ಮೂಲಭೂತ ಸೌಕರ್ಯ ಹಾಗೂ ಕಾರ್ಪಸ್ ಫಂಡ್ ಒದಗಿಸಬೇಕು ಎಂದು ತಿಳಿಸಿದರು.

ಅಗತ್ಯವಿರುವೆಡೆ ಸ್ಮಶಾನ ಭೂಮಿ: ಜಾತಿ ವ್ಯವಸ್ಥೆಯಿಂದಾಗಿ ಅಸ್ಪೃಶ್ಯತೆ ಎದುರಿಸುತ್ತಿರುವ ಸಮುದಾಯಗಳಿಗೆ ಶವ ಸಂಸ್ಕಾರದ ವೇಳೆ ಅಡ್ಡಿಪಡಿಸಿ ಅಟ್ರಾ ಸಿಟಿ ಪ್ರಕರಣಗಳು ದಾಖಲಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಇದಕ್ಕೋಸ್ಕರ ಪ್ರತಿ ಕಂದಾಯ ಗ್ರಾಮಗಳನ್ನು ಗುರುತಿಸಿ, ಅಗತ್ಯವಿರುವ ಕಡೆ ಸ್ಮಶಾನ ಭೂಮಿ ಒದಗಿಸಿ, ದಾರಿ ಕಲ್ಪಿಸಿಕೊಡಲಾಗುವುದು. ಎಸ್ಸಿಪಿ, ಟಿಎಸ್ಪಿ ನಿಧಿಯ ಅಡಿಯಲ್ಲಿ ಸ್ಮಶಾನಗಳ ತಡೆಗೋಡೆ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳಲು ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಆದೇಶಿಸಲಾಗಿದೆ.

ಆನ್ಲೈನ್ ಹೆಲ್ಪ್ ಡೆಸ್ಕ್: ಆಯೋಗಕ್ಕೆ ದೂರು ಸಲ್ಲಿಸಲು ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಸಂಪೂರ್ಣ ಆನ್ಲೈನ್ ವ್ಯವಸ್ಥೆ ತರಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಪ್ರತಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ, ಅಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು. ಆ ಬಳಿಕ ನೋಟಿಸ್ ಜಾರಿ ಮಾಡಿ, ಅಗತ್ಯ ಬಿದ್ದರೆ ದೂರವಾಣಿ ಮೂಲಕ ಕರೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.

ಆಯೋಗಕ್ಕೆ ಸಲ್ಲಿಕೆಯಾಗಿರುವ ಸುಮಾರು 4,100 ಪ್ರಕರಣಗಳ ಪೈಕಿ ಕಳೆದ ಆರೂವರೆ ತಿಂಗಳಲ್ಲಿ 800 ಕ್ಕೂ ಹೆಚ್ಚು ಪ್ರಕರಣಗಳನ್ನು ಕೋರ್ಟ್ ಮುಖಾಂತರ ಪರಿಶೀಲಿಸಿ, 500 ರಿಂದ 600 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ತಿಳಿಸಿ ಕುಂದು ಕೊರತೆ ಸಭೆಯಲ್ಲಿ 70 ಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಕಾರ್ಯದರ್ಶಿ ಡಾ.ಹೆಚ್.ಎಸ್. ಶಿವರಾಮ್, ಸದಸ್ಯರಾದ ಗೀತಾ ಥಾವಂಶಿ, ಎನ್.ದಿವಾಕರ್, ಸುನೀಲ್ ಎಂ. ಉಕ್ಕಲಿ ಉಪಸ್ಥಿತರಿದ್ದರು.