
ವಾಷಿಂಗ್ಟನ್,ನ.೨೯-ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್, ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಸಂಸ್ಥೆಯ ಉಪಗ್ರಹ ಇಂಟರ್ನೆಟ್ ವ್ಯವಸ್ಥೆಯಾದ ’ಸ್ಟಾರ್ಲಿಂಕ್ ಬಳಸಿಕೊಂಡಿದೆ ಎಂದು ’ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ತನ್ನ ಸೇನಾ ಪಡೆಗಳ ನಡುವೆ ನಿರಂತರ ಸಂವಹನ ಸಾಧಿಸಲು ಹಾಗೂ ಮಾನವರಹಿತ ಡ್ರೋನ್ ದಾಳಿಗಳನ್ನು ನಡೆಸಲು ಇರಾನ್ ಈ ತಂತ್ರಜ್ಞಾನವನ್ನು ಬಳಸಿಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ಸೇನೆಯ ವಿರುದ್ಧ ಇರಾನ್ ನಡೆಸಿದ ಕಾರ್ಯಾಚರಣೆಗಳಲ್ಲಿ ಸ್ಟಾರ್ಲಿಂಕ್ನ ಎರಡು ಅನಧಿಕೃತ ಬಳಕೆಯಾಗಿರುವ ಬಗ್ಗೆ ಎಲೋನ್ ಮಸ್ಕ್ ಅವರಿಗೆ ಮಾಹಿತಿ ಲಭ್ಯವಾಗಿದ್ದು, ಇದು ಅವರ ತೀವ್ರ ಕೋಪಕ್ಕೆ ಕಾರಣವಾಗಿದೆ ಎಂದು ಸ್ಪೇಸ್ಎಕ್ಸ್ ಚರ್ಚೆಗಳ ಬಗ್ಗೆ ತಿಳಿದಿರುವ ಇಬ್ಬರು ವ್ಯಕ್ತಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಇದೇ ವೇಳೆ, ಮಿಲಿಟರಿ ಉದ್ದೇಶಕ್ಕಾಗಿಯೇ ವಿನ್ಯಾಸಗೊಳಿಸಲಾದ ಸ್ಟಾರ್ಲಿಂಕ್ನ ’ಸ್ಟಾರ್ಶೀಲ್ಡ್’ ಆವೃತ್ತಿಯನ್ನು ಪೈಲಟ್ ರಹಿತ ದಾಳಿ ಡ್ರೋನ್ಗಳನ್ನು ಹಾರಿಸಲು ಅಮೆರಿಕ ಸೇನೆಯು ಬಳಸುತ್ತಿರುವುದು ಸಹ ಮಸ್ಕ್ ಗಮನಕ್ಕೆ ಬಂದಿದೆ. ಆದರೆ, ಡ್ರೋನ್ ಹಾರಾಟಕ್ಕೆ ಪ್ರತ್ಯೇಕ ಹಾಗೂ ಹೆಚ್ಚು ದುಬಾರಿ ಯೋಜನೆಯ ಅಗತ್ಯವಿದ್ದರೂ, ಸೇನೆಯು ಅಗ್ಗದ ನೆಲ-ಆಧಾರಿತ ಯೋಜನೆಯನ್ನು ಬಳಸುತ್ತಿತ್ತು ಎಂದು ವರದಿ ವಿವರಿಸಿದೆ.
ಇರಾನ್ನಿಂದ ಸ್ಟಾರ್ಲಿಂಕ್ ಬಳಕೆಯಾಗಿರುವ ಕುರಿತು ಯುಎಸ್ ಸೆಂಟ್ರಲ್ ಕಮಾಂಡ್ ಗೌಪ್ಯ ವರದಿಯೊಂದನ್ನು ಸಿದ್ಧಪಡಿಸಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಕಚೇರಿಗೆ ಕಳುಹಿಸಿದೆ ಎನ್ನಲಾಗಿದೆ. ಆದರೆ, ಅಂತಹ ಯಾವುದೇ ವರದಿ ರಕ್ಷಣಾ ಕಾರ್ಯದರ್ಶಿಯ ಕಚೇರಿಗೆ ಬಂದಿರುವ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ’ರಾಯಿಟರ್ಸ್’ ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದೆ. ಇತ್ತ ಸ್ಪೇಸ್ಎಕ್ಸ್ ಮತ್ತು ಇರಾನ್ ವಿದೇಶಾಂಗ ಸಚಿವಾಲಯಗಳು ಈ ಬೆಳವಣಿಗೆಯ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇರಾನ್ನಲ್ಲಿ ಇಂಟರ್ನೆಟ್ ಸೇವೆ ನೀಡಲು ಸ್ಟಾರ್ಲಿಂಕ್ಗೆ ಅಧಿಕೃತ ಅನುಮತಿ ಇಲ್ಲದಿದ್ದರೂ, ಅಲ್ಲಿ ಸೇವೆ ಸಕ್ರಿಯವಾಗಿದೆ ಎಂದು ಮಸ್ಕ್ ಈ ಹಿಂದೆ ಹೇಳಿದ್ದರು. ಕಳೆದ ಜನವರಿಯಲ್ಲಿ ಇರಾನ್ನಲ್ಲಿ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ವೇಳೆ ಅಲ್ಲಿನ ಸರ್ಕಾರ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದರ ಬೆನ್ನಲ್ಲೇ, ಅಮೆರಿಕ ಸರ್ಕಾರವು ಸಾವಿರಾರು ಸ್ಟಾರ್ಲಿಂಕ್ ಸಾಧನಗಳನ್ನು ಇರಾನ್ಗೆ ರಹಸ್ಯವಾಗಿ ರವಾನಿಸಿತ್ತು ಎಂದು ’ವಾಲ್ ಸ್ಟ್ರೀಟ್ ಜರ್ನಲ್ ಈ ಹಿಂದೆ ವರದಿ ಮಾಡಿತ್ತು.




















