
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ.20 ನಗರದ ಅಮರಾವತಿ ದೋಬಿ ಘಾಟ್ ಬಳಿಯ ಹೊಸಪೇಟೆ ಉಪವಿಭಾಗದ ಆಸ್ಪತ್ರೆ ರಸ್ತೆಯಲ್ಲಿನ ಬಸವಣ್ಣ ಕಾಲುವೆಯ ಸೇತುವೆ ಗುಂಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಆಗುತ್ತಿರುವ ಹಿನ್ನಲೆಯಲ್ಲಿ ದುರಸ್ಥಿಗೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಹಾಗೂ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಉಪವಿಭಾಗದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಮುಖ್ಯ ರಸ್ತೆಯಲ್ಲಿನ ಬಸವಣ್ಣ ಕಾಲುವೆಗೆ ನಿರ್ಮಿಸಲಾದ ಸೇತುವೆ ದೊಡ್ಡ ಗುಂಡಿ ಬಿದ್ದು. ಹಲವಾರು ಅಪಘಾತಗಳಿಗೆ ಆಸ್ಪದ ನೀಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿ ಸೇತುವೆ ದುರಸ್ಥಿ ಮಾಡದಿರುವುದನ್ನು ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ನಾಯ್ಕ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಕೂಡಲೇ ಗುಂಡಿ ಮುಚ್ಚಿ ರಸ್ತೆ ದುರಸ್ಥಿ ಮಾಡಬೇಕು. ಈ ರಸ್ತೆಯಲ್ಲಿ ಪ್ರತಿ ದಿನ ಮಹಿಳೆಯರು, ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಎನಾದರೂ ಅನಾಹುತವಾದರೆ ಇದಕ್ಕೆ ಯಾರು ಹೊಣೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಶಾಸಕರ ವಿರುದ್ದ ಘೋಷಣೆ ಕೂಗಿದರು. ಶೀಘ್ರವೇ ರಸ್ತೆ ದುರಸ್ಥಿ ಆಗದಿದ್ದರೆ, ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಂತರ ಪ್ರತಿಭಟನಾಕಾರರು ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಪೌರಾಯುಕ್ತ ಎರಗುಡಿ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ನಾಯ್ಕ್ ಗೆ ಮನವಿ ಸಲ್ಲಿಸಿದರು. ಮನವಿಪತ್ರ ಸ್ವೀಕರಿಸಿದ ಅಧಿಕಾರಿಗಳು ಕೂಡಲೇ ತಾತ್ಕಾಲಿಕ ದುರಸ್ಥಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು. 2 ತಿಂಗಳಲ್ಲಿ ಶಾಶ್ವತ ಕಾಮಗಾರಿ ನಡೆಸುವುದಾಗಿ ನೀಡಿದ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ರಸ್ತೆ ಪಡೆ ಪ್ರತಿಭಟನೆ ಹಿನ್ನಲೆಯಲ್ಲಿ ಈ ಭಾಗದಲ್ಲಿ ಕೆಲ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಬಡಾವಣೆ ಪಿಎಸೈ ಶಿವ ಕುಮಾರ್ ಮತ್ತವರ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆ ವಿಜಯನಗರ ಜಿಲ್ಲೆ ಯುವ ಘಟಕದ ಅಧ್ಯಕ್ಷ ಹೆಚ್.ಈರಣ್ಣ, ಗೌರವಾಧ್ಯಕ್ಷ ವೈ.ರುದ್ರಪ್ಪ, ಉಪಾಧ್ಯಕ್ಷ ಹೆಚ್.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಕೆ.ರವಿ ಕುಮಾರ್, ಕಾರ್ಯದರ್ಶಿ ಹೊನ್ನೂರುಸ್ವಾಮಿ, ಕರುನಾಡ ಕಲಿಗಳ ಕ್ರೀಯಾಶೀಲ ಸಮಿತಿ ಅಧ್ಯಕ್ಷ ಪಿ.ವಿ.ವೆಂಕಟೇಶ, ಉಪಾಧ್ಯಕ್ಷ ಗುಜ್ಜಲ ಗಣೇಶ, ಸ್ಲಂ ಜನರ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟೇಶ್, ಯುವ ಕಾಂಗ್ರೇಸ್ ಮುಖಂಡ ಸಿ.ಆರ್.ಭರತ್, ಶೇಕ್ಷಾವಲಿ ಸೇರಿದಂತೆ ಮತ್ತಿತರರು ಭಾಗವಹಿಸದ್ದರು.





















