Home ಮುಖಪುಟ ಸುದ್ದಿ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಸೈಕಲ್ ಜಾಥಾ

ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಸೈಕಲ್ ಜಾಥಾ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಸೈಕಲ್ ಜಾಗೃತಿ ಜಾಥಾ ನಡೆಸಲಾಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ನೀಟ್ ಅಕ್ರಮ

ಬೆಂಗಳೂರು, ಜು. ೧೨- ವೈದ್ಯಕೀಯ ಶಿಕ್ಷಣ ಕೋರ್ಸ್‌ನ ಪ್ರವೇಶ ಪರೀಕ್ಷೆ (ನೀಟ್) ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಯುವ ಕಾಂಗ್ರೆಸ್ ಇಂದು ಸೈಕಲ್ ಜಾಥಾ ನಡೆಸಿತು.


ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ಆರಂಭವಾದ ಈ ಸೈಕಲ್ ಜಾಥಾ ವಿಧಾನಸೌಧ ಮುಂಭಾಗದಿಂದ ಕೆ.ಆರ್. ಸರ್ಕಲ್, ಆನಂದ ಸರ್ಕಲ್ ವರೆಗೂ ನಡೆಯಿತು.


ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಾಂಕೇತಿಕವಾಗಿ ಸೈಕಲ್ ತುಳಿಯುವ ಮೂಲಕ ಜಾಥಾಗೆ ಚಾಲನೆ ನೀಡಿದರು. ರಾಜ್ಯ ಯುವ ಕಾಂಗ್ರೆಸ್ ಮಂಜುನಾಥಗೌಡ, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ತಾರೀಕ್ ಭಗವಾನ್ ಸೇರಿದಂತೆ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರುಗಳು ಸೈಕಲ್ ಜಾಥಾದಲ್ಲಿ ಭಾಗಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರ ರಾಜೀನಾಮೆಗೆ ಆಗ್ರಹಿಸಿದರು.


ಹರಿಪ್ರಸಾದ್ ಹೇಳಿಕೆ
ನೀಟ್ ಪರೀಕ್ಷೆಯ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹಲವು ಯುವಕ-ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವ ಜನಾಂಗದ ಭವಿಷ್ಯ ಅಂಧಕಾರದಲ್ಲಿದೆ ಎಂದು ದೂರಿದರು.


ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಯುವ ಕಾಂಗ್ರೆಸ್ ಈ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಶಾ ರಾಜೀನಾಮೆ ಕೊಡಲಿ
ದೇಶಕ್ಕೆ ಅಕ್ರಮ ವಲಸಿಗರು ಬರಲು ಕಾರಣ ಕೇಂದ್ರ ಗೃಹ ಸಚಿವ ಅಮಿತ್ ಶಾ. ಹಾಗಾಗಿ ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು. ಇಲ್ಲವೇ ರಾಷ್ಟ್ರಪತಿಗಳು ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು.


ನೀಟ್ ಅಕ್ರಮ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ನುಸುಳುಕೋರರು ದೇಶಕ್ಕೆ ಬಂದಿದ್ದರೆ ಅದಕ್ಕೆ ಅಮಿತ್ ಶಾ ಕಾರಣ. ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ದೇಶದ ಗಡಿ ಭಾಗದಲ್ಲಿ ನುಸುಳುಕೋರರು ದೇಶಕ್ಕೆ ಬರಲು ಕಾರಣಕರ್ತರು ಅಮಿತ್ ಶಾ ಎಂದು ಅವರು ಆರೋಪಿಸಿದರು.


ಬಾಂಗ್ಲಾದಿಂದ ಅಕ್ರಮ ವಲಸಿಗರು ಕರ್ನಾಟಕಕ್ಕೆ ಬರಲು ೪ ಸಾವಿರ ಕಿಲೋ ಮೀಟರ್ ಕ್ರಮಿಸಬೇಕಾಗುತ್ತದೆ. ನುಸುಳುಕೋರರು ರಾಜ್ಯಕ್ಕೆ ಬಂದಿದ್ದರೆ ಅದು ಕರ್ನಾಟಕ ಸರ್ಕಾರದಿಂದಲ್ಲ, ಅಮಿತ್ ಶಾ ಅವರು ನೋಡಿಕೊಳ್ಳುತ್ತಿರುವ ಕೇಂದ್ರ ಗೃಹ ಇಲಾಖೆಯ ವೈಫಲ್ಯದಿಂದ ಎಂದು ಅವರು ದೂರಿದರು.