
ಬೆಂಗಳೂರು, ಜು. ೧೨- ಬೆಂಗಳೂರು ಮಹಾನಗರದ ಸಾರ್ವಜನಿಕ ಸಾರಿಗೆಗೆ ನೆರವು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ ೧೫೦೫ ಕೋಟಿ ಸಹಾಯಧನದೊಂದಿಗೆ ೪೫೦೦ ಇ.ವಿ. ಬಸ್‌ಗಳನ್ನು ಮಂಜೂರು ಮಾಡಿದ್ದರೂ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡದೆ ವಿಳಂಬ ಮಾಡುತ್ತಿರುವುದಕ್ಕೆ ಜೆಡಿಎಸ್ ಅಸಮಾಧಾನ ಹೊರ ಹಾಕಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಶೇ. ೬೦ ರಷ್ಟು ಖ್ಯಾತಿಯ ಕಮೀಷನ್ ಕಾಂಗ್ರೆಸ್ ಸರ್ಕಾರಕ್ಕೆ ಸಾರ್ವಜನಿಕ ಸಾರಿಗೆಗಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ದೂರಿದೆ.
ಇ.ವಿ. ಬಸ್‌ಗಳಿಗೆ ಸಂಬಂಧಿಸಿದಂತೆ ೨೦೨೫ರಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡದೆ ದಿನದೂಡುತ್ತಿರುವುದು ಏಕೆ, ಬೇರೆ ರಾಜ್ಯಗಳಿಗೆ ಬಸ್‌ಗಳು ಹಂಚಿಕೆಯಾದರೆ ಕನ್ನಡಿಗರಿಗೆ ಉತ್ತರಿಸುವವರು ಯಾರು ಎಂದು ಜೆಡಿಎಸ್ ಪ್ರಶ್ನಿಸಿದೆ.
ಕೇಂದ್ರ ಸಚಿವರಾದ ಕುಮಾರಸ್ವಾಮಿಯವರು ರಾಜ್ಯದ ಒಳಿತಿಗಾಗಿ ಶ್ರಮಿಸುತ್ತಿದ್ದರೆ ಅದಕ್ಕೆ ಸದಾ ಅಡ್ಡಗಾಲು ಹಾಕುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷ ಸಾಧನೆ ಮುಂದುವರೆಸುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನ ಎಂದು ಜೆಡಿಎಸ್ ಹೇಳಿದೆ.
ಹೈದರಾಬಾದ್, ಸೂರತ್, ಅಹಮದಾಬಾದ್ ನಗರಗಳು ಈಗಾಗಲೇ ಕಾರ್ಯಾದೇಶ ನೀಡಿ ಮುನ್ನುಗ್ಗುತ್ತಿದ್ದರೆ ನಮ್ಮ ರಾಜ್ಯದ ಸೋಮಾರಿ ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನು ಕಡತ ಧೂಳು ಹಿಡಿಸಿಕೊಂಡು ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೇ, ಬೆಂಗಳೂರಿನ ಜನರಿಗೆ ಬಸ್‌ಗಳು ಬೇಡವೇ. ಇ.ವಿ. ಬಸ್‌ಗಳಿಗಾಗಿ ಕೇಂದ್ರ ಸರ್ಕಾರ ನೀಡಿರುವ ಸಹಾಯಧನವನ್ನು ಬಳಸಿಕೊಳ್ಳದ ನಿಮ್ಮ ಆಡಳಿತ ವೈಫಲ್ಯಕ್ಕೆ ಏನ್ನೆನಬೇಕು ಎಂದು ಜೆಡಿಎಸ್ ಪ್ರಶ್ನಿಸಿ, ಬಸ್‌ಗಳು ಬೇರೆ ರಾಜ್ಯಗಳ ಪಾಲಾದರೆ ಬೆಂಗಳೂರಿಗರು ನಿಮ್ಮನ್ನು ಕ್ಷಮಿಸಲ್ಲ. ನಿಮ್ಮ ಸರ್ಕಾರ ಈ ನಿರಾಸಕ್ತಿ ಮತ್ತು ವಿಳಂಬ ನೀತಿಗೆ ಕನ್ನಡಿಗರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದೆ.
































