
ಮೈಸೂರು, ಜು.೧೨- ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ಜಾನಕಮ್ಮ ಅವರ ಅಂತ್ಯಸಂಸ್ಕಾರ ಸಂಜೆ ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಸದ್ಯ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನಡೆಯಲಿದ್ದು, ಅವರ ಪುತ್ರ ಮುರುಳಿಕೃಷ್ಣ ಪುತ್ರಿ ಅಪ್ಸರಾ ಅಂತಿಮ ವಿಧಿ-ವಿಧಾನ ನೆರವೇರಿಸಲಿದ್ದಾರೆ.
ಇನ್ನು ಅಂತ್ಯಸಂಸ್ಕಾರ ನಡೆಯುವ ಕಣಿಯನಹುಂಡಿ ಗ್ರಾಮದ ತೋಟದ ಮನೆಯಲ್ಲಿ ೨೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ೨ ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಅಂತಿಮ ವಿಧಿವಿಧಾನಗಳ ವೇಳೆ ವಿವಿಐಪಿಗಳು ಹಾಗೂ ಗಣ್ಯರಷ್ಟೇ ಅಲ್ಲದೆ,ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೂ ವೀಕ್ಷಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಕಣಿಯನಹುಂಡಿ ಗ್ರಾಮಕ್ಕೆ ಹೋಗುವ ರಸ್ತೆ ಸಾಕಷ್ಟು ಕಿರಿದಾಗಿರುವುದರಿಂದ, ವಾಹನ ಸವಾರರಿಗೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಪೊಲೀಸರು ವಿಶೇಷ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ.
ಇದಲ್ಲದೆ, ಜಾನಕಿ ಅವರ ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ಚಲನಚಿತ್ರರಂಗದ ಖ್ಯಾತ ನಟ-ನಟಿಯರು, ನಿರ್ದೇಶಕರು, ಸರ್ಕಾರದ ಪರವಾಗಿ ಸಚಿವರು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ.ಅಂತಿಮ ಕ್ಷಣದಲ್ಲಿ ಭಾಗವಹಿಸಲು ಕನಿಷ್ಠ ೨ ರಿಂದ ೩ ಸಾವಿರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಬರುವ ಸಾಧ್ಯತೆಯಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಂಡಿದೆ.
ಅಂತಿಮ ದರ್ಶನ ಪಡೆದ ಗಣ್ಯರು, ಅಭಿಮಾನಿಗಳು
ಗಾನಕೋಗಿಲೆ ಎಸ್. ಜಾನಕಿ ನಿಧನದಿಂದ ಅರಮನೆ ನಗರಿ ಮೈಸೂರಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಈ ವೇಳೆ ತಮ್ಮ ನೆಚ್ಚಿನ ಗಾಯಕಿಯನ್ನು ಕಳೆದುಕೊಂಡ ಅಭಿಮಾನಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.
ಪಾರ್ಥಿವ ಶರೀರ ಇಡಲಾಗಿದ್ದ ಮೈದಾನದಲ್ಲಿ ಸಾಲುಗಟ್ಟಿ ನಿಂತಿದ್ದ ನೂರಾರು ಅಭಿಮಾನಿಗಳು ಶಿಸ್ತಿನಿಂದ ಸರದಿಯಲ್ಲಿ ಬಂದು ಭಾವುಕರಾಗಿ ಕೈಮುಗಿದು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಇನ್ನು ಸಚಿವರು, ಶಾಸಕರು, ಸ್ಥಳೀಯ ಜನಪ್ರನಿಧಿಗಳು ಸೇರಿದಂತೆ ಅನೇಕ ಗಣ್ಯರು ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿದ ಅಂತಿಮ ನಮನ ಸಲ್ಲಿಸಿದರು.
ಅಜ್ಜಿ ನೆನೆದು ಮೊಮ್ಮಗಳು ಭಾವುಕ
ಹಿರಿಯ ಗಾಯಕಿ ಎಸ್.ಜಾನಕಿ ನೆನೆದು ಅವರ ಮೊಮ್ಮಗಳು ಅಪ್ಸರಾ, ಭಾವುಕರಾಗಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅನಾರೋಗ್ಯ ಸಮಸ್ಯೆಯಿಂದ ಅಜ್ಜಿ ನಿಧನರಾಗಿದ್ದು, ಘಟನೆ ದುಃಖ ಉಂಟುಮಾಡಿದೆ. ಅವರು ತಮ್ಮ ಗಾಯನದ ಮೂಲಕ ಅಪಾರ ಜನರ ಮನ ಗೆದ್ದಿದ್ದರು. ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರಿಗೆ ಮೈಸೂರು ಅಂದರೆ ತುಂಬಾ ಇಷ್ಟ, ಅವರು ಇಲ್ಲೇ ಇದ್ದರು. ಕರ್ನಾಟಕದ ಜನತೆ ಅಜ್ಜಿಗೆ ಅಪಾರ ಪ್ರೀತಿ ತೋರಿದ್ದಾರೆ. ಅಜ್ಜಿಗೆ ಸರ್ಕಾರಿ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನಮ್ಮ ಕುಟುಂಬದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.
ಗದ್ದಿಗೆ ಮುಖ್ಯ ರಸ್ತೆಗೆ ಹೆಸರಿಡಿ
ಹಿರಿಯ ಗಾಯಕಿ ಎಸ್. ಜಾನಕಿ ಅವರ ಕೊನೆಯ ದಿನಗಳ ಬಗ್ಗೆ ಕೇರ್ ಟೇಕರ್ ನವೀನ್ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ತಮ್ಮ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿದಾಗ ಜಾನಕಮ್ಮನವರು ತೀವ್ರ ಬೇಸರಗೊಂಡಿದ್ದರಂತೆ. ಜನಗಳ ಮಧ್ಯೆ ಇರಲು ಇಷ್ಟವಿಲ್ಲ ಎಂದು ಹೇಳಿ, ಕಾಡಿಗೆ ಹೋಗಿ ಬಿಡುತ್ತೇನೆ ಎಂಬಂತಹ ಮಾತುಗಳನ್ನು ಕೂಡ ಆಡಿದ್ದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ
ಅಲ್ಲದೆ, ಮೈಸೂರು ಮೇಲೆ ಅಪಾರ ಪ್ರೀತಿ ಹೊಂದಿದ್ದ ಜಾನಕಮ್ಮನವರ ನೆನಪಿಗಾಗಿ ನವೀನ್ ಅವರು ಒಂದು ವಿಶೇಷ ಮನವಿಯನ್ನೂ ಮಾಡಿದ್ದು, ಗದ್ದಿಗೆ ಮುಖ್ಯ ರಸ್ತೆಗೆ ಎಸ್. ಜಾನಕಿ ಮುಖ್ಯ ರಸ್ತೆ ಎಂದು ಹೆಸರಿಸಬೇಕು ಎಂದು ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಸಿಎಂ ಈಡೇರಿಸಿದರೆ, ಜಾನಕಿ ಅವರಿಗೆ ಮೈಸೂರು ಮೇಲಿದ್ದ ಪ್ರೀತಿ ಸಾರ್ಥಕವಾಗಲಿದೆ ಎಂದು ನವೀನ್ ಹೇಳಿದ್ದಾರೆ.
ಸಂಗೀತ ನಿರ್ದೇಶಕ ಇಳಯರಾಜ ಸಂತಾಪ
ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಸಂಗೀತ ನಿರ್ದೇಶಕ ಇಳಯರಾಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಲಂಡನ್‌ನಿಂದ ವೀಡಿಯೊ ಮೂಲಕ ಇಳಯರಾಜ್, ಜಾನಕಿ ಅವರ ನಿಧನದ ಸುದ್ದಿ ಕೇಳಿ ತಮಗೆ ಅತ್ಯಂತ ದುಃಖ ಮತ್ತು ಆಘಾತವಾಗಿದೆ.ಜೀವನದಲ್ಲಿ ಅಸಹನೀಯ ದುಃಖಗಳನ್ನು, ಸಹಿಸಲಾಗದ ಘಟನೆಗಳನ್ನು ಸಹಿಸಿಕೊಂಡು ಅವರು ಬದುಕಿದರು ಎಂಬುದು ಅತ್ಯಂತ ವೇದನೆಯ ವಿಷಯ ಎಂದು ಇಳಯರಾಜ್ ಸ್ಮರಿಸಿದ್ದಾರೆ.
ಅವರು ಅತ್ಯಂತ ಕಠಿಣ ಪರಿಶ್ರಮಿ. ಜಾನಕಿ ಅವರ ಅಗಲಿಕೆ ಭಾರತೀಯ ಚಲನಚಿತ್ರ ಸಂಗೀತ ಲೋಕಕ್ಕೆ ಒಂದು ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋದಾಗಿ ಅವರು ತಿಳಿಸಿದ್ದಾರೆ.
ಪ್ರಧಾನಿ, ರಾಷ್ಟ್ರಪತಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಗಾನಕೋಗಿಲೆ ಎಸ್. ಜಾನಕಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಹಾಗೂ ರಾಷ್ಟ್ರಪತಿಗಳು ಎಸ್. ಜಾನಕಿ ಅಮ್ಮ ಅವರ ನಿಧನ ಸಂಗೀತ ಮತ್ತು ಸಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟ. ಹಲವು ಭಾಷೆಗಳಲ್ಲಿ ಅವರು ಹಾಡಿದ ಗೀತೆಗಳು ತಲೆಮಾರುಗಳ ಮನಸ್ಸು ಗೆದ್ದಿವೆ. ಪ್ರತಿಯೊಂದು ಭಾವನೆಗೂ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ್ದರು. ಅವರ ಹಾಡುಗಳು ಮುಂದಿನ ಪೀಳಿಗೆಯನ್ನೂ ಮೋಡಿ ಮಾಡುತ್ತಲೇ ಇರುತ್ತವೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಲೋಕದ ಎಲ್ಲರಿಗೂ ನನ್ನ ಸಂತಾಪ. ಓಂ ಶಾಂತಿ’ ಎಂದು ಬರೆದಿದ್ದಾರೆ.
ಅಲ್ಲದೆ,ಜಾನಕಿ ಅಮ್ಮ ಅವರ ಅಗಲಿಕೆಯಿಂದ ಭಾರತ ಸಂಗೀತ ಲೋಕದ ಅಮೂಲ್ಯ ಧ್ವನಿಯನ್ನು ಕಳೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ. ’ಆರು ದಶಕಗಳಿಗೂ ಹೆಚ್ಚು ಕಾಲದ ಸಂಗೀತ ಪಯಣದಲ್ಲಿ ಸುಮಾರು ೨೦ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರ ಅಮೋಘ ಗಾಯನ ಹಲವು ತಲೆಮಾರುಗಳನ್ನು ರಂಜಿಸಿದೆ. ಅವರ ಸಂಗೀತ ಎಂದೆಂದಿಗೂ ಅಮೂಲ್ಯವಾಗಿ ಉಳಿಯಲಿದೆ. ಅವರ ಕುಟುಂಬ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಸಂತಾಪ ಎಂದು ಪೋಸ್ಟ್ ಮಾಡಿದ್ದಾರೆ.
ಸಿಎಂ ಸೇರಿ ಗಣ್ಯರ ಸಂತಾಪ
ಗಾನಕೋಗಿಲೆ ಎಸ್.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಸಚಿವರು, ಶಾಸಕರು, ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸದ್ಯ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಎಸ್.ಜಾನಕಿ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಡಿಸಿಎಂ ಜಿ.ಪರಮೇಶ್ವರ್ ಸಂತಾಪ ವ್ಯಕ್ತಪಡಿಸಿ, ಸಂಗೀತ ಪ್ರಿಯರನ್ನು ರಂಜಿಸಿದ್ದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಸಂಗೀತ ಲೋಕ ಇಂದು ಬಡವಾಗಿದೆ. ಜಾನಕಿಯಮ್ಮನ ಹಾಡುಗಳಿಗೆ ಕಿವಿಗೊಟ್ಟು ಕೂತರೆ ಸಂಗೀತದ ಕಡಲಲ್ಲಿ ತೇಲಿಹೋದ ಅನುಭವವಾಗುತ್ತಿತ್ತು ಎಂದಿದ್ದಾರೆ.
ಕೋಟ್ಯಂತರ ಜನರ ಮನಸ್ಸನ್ನು ಸ್ಪರ್ಶಿಸಿದ ದಿಗ್ಗಜ ಹಿನ್ನಲೆ ಗಾಯಕಿ ಶ್ರೀಮತಿ ಎಸ್. ಜಾನಕಿ ಅಮ್ಮನವರು ಇಹಲೋಕ ತ್ಯಜಿಸಿದ ಸುದ್ದಿ ಅತ್ಯಂತ ದುಃಖ ತಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಂಬನಿ ಮಿಡಿದಿದ್ದಾರೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದು,೬ ದಶಕಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿಕೆ ಸಂತಾಪ ವ್ಯಕ್ತಪಡಿಸಿ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್ ಗಾಯಕಿ ಜಾನಕಿ ಅವರು. ಮೈಸೂರಿನಲ್ಲಿ ನೆಲೆಸಿದ್ದ ಅವರು ಕನ್ನಡಿಗರಿಗೆ ಬಹು ಅಚ್ಚುಮೆಚ್ಚಿನ ಗಾಯಕರಾಗಿದ್ದರು ಎಂದಿದ್ದಾರೆ.
ಎಸ್.ಜಾನಕಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿ ತಮ್ಮ ಸುದೀರ್ಘ ಗಾಯನ ಜೀವನದಲ್ಲಿ ಅವರು ೧೭ ಭಾಷೆಗಳಲ್ಲಿ ೪೮ ಸಾವಿರಕ್ಕೂ ಅಧಿಕ ಅಮರ ಗೀತೆಗಳಿಗೆ ದನಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಶ್ರದ್ಧಾಂಜಲಿ
ಜಾನಕಿ ಅವರ ನಿಧನಕ್ಕೆ ದೇಶದ ಗಣ್ಯರು,ಸಂಗೀತ ಸೇರಿದಂತೆ ವಿವಿಧ ಕ್ಷೇತ್ರದವರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅವರ ಧ್ವನಿ ಸದಾ ಸಂಗೀತ ಪ್ರೇಮಿಗಳ ಹೃದಯದಲ್ಲಿ ಜೀವಂತವಾಗಿರಲಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಅದರಲ್ಲೂ ಖ್ಯಾತ ಹಿರಿಯ ಹಿನ್ನೆಲೆ ಗಾಯಕಿಯ ಸಾವಿನ ದುಃಖದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿಯ ಮಹಾಪೂರವೇ ಹರಿದುಬಂದಿದೆ. ವಿವಿಧ ತಲೆಮಾರಿನ ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಚಿತ್ರರಂಗದ ಸಂಗೀತ ಲೋಕವನ್ನು ಆಳಿದ ದಿವ್ಯ ಚೇತನದ ಅಗಲಿಕೆಗೆ ನೆಟ್ಟಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದು,ಒಂದು ಅದ್ಭುತ ಯುಗ ಕೊನೆಗೊಂಡಿದೆ.ಆದರೆ ಜಾನಕಮ್ಮನ ಧ್ವನಿ ತಲೆಮಾರುಗಳವರೆಗೆ ಹೃದಯಗಳನ್ನು ಸ್ಪರ್ಶಿಸುತ್ತಲೇ ಇರುತ್ತದೆ.ಇಂದು ನಾವು ನಿಜವಾದ ದಂತಕಥೆಯನ್ನು ಕಳೆದುಕೊಂಡಿದ್ದೇವೆ.ನಮಗೆ ಸಾವಿರಾರು ಮಧುರ ಗೀತೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಅಮ್ಮ ಎಂದು ಪೋಸ್ಟ್ ಮಾಡಿ ತಮ್ಮ ದುಃಖ ಹೊರಹಾಕಿದ್ದಾರೆ.
ಇದಲ್ಲದೆ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶ-ವಿದೇಶಗಳ ಅಭಿಮಾನಿಗಳು ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಜಾನಕಮ್ಮನ ಧ್ವನಿ ಹೇಗೆ ಎಲ್ಲರನ್ನೂ ತಲುಪಿತ್ತು ಎಂಬುದನ್ನು ನೆನದಿರುವ ಅಭಿಮಾನಿಗಳು, ಸಣ್ಣ ಮಗುವಿನ ತೊದಲು ನುಡಿಯಿಂದ ಹಿಡಿದು, ಗಂಭೀರ ಶಾಸ್ತ್ರೀಯ ಸಂಗೀತ ಮತ್ತು ಅತ್ಯಂತ ನೋವಿನ ಭಾವನಾತ್ಮಕ ಗೀತೆಗಳವರೆಗೆ ಅವರ ಕಂಠಸಿರಿ ಸಾಟಿಯಿಲ್ಲದ್ದು. ಮೈಸೂರಿನಲ್ಲಿ ಗಾನ ಕೋಗಿಲೆಯ ಭೌತಿಕ ಧ್ವನಿ ಇನ್ನು ಮೂಗದಿದ್ದರೂ, ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಗೌರವವ, ಅಭಿಮಾನವು ಜಾನಕಮ್ಮನನ್ನು ಎಂದೆಂದಿಗೂ ಶಾಶ್ವತವಾಗಿ ಉಳಿಸುತ್ತವೆ ಎಂದಿದ್ದಾರೆ.
































