Home ಜಿಲ್ಲೆ ಯಾದಗಿರಿ ಕಂಡ ದಿಟ್ಟ, ಪ್ರಾಮಾಣಿಕ ಐಎಎಸ್ ಅಧಿಕಾರಿ ಲವೀಶ್ ಓರಡಿಯ: ಬಾಬುರಾವ್ ಕಾಡ್ಲೂರ್

ಯಾದಗಿರಿ ಕಂಡ ದಿಟ್ಟ, ಪ್ರಾಮಾಣಿಕ ಐಎಎಸ್ ಅಧಿಕಾರಿ ಲವೀಶ್ ಓರಡಿಯ: ಬಾಬುರಾವ್ ಕಾಡ್ಲೂರ್

ಯಾದಗಿರಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಿಟ್ಟ, ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಲವೀಶ್ ಓರಡಿಯ ಅವರನ್ನು ಸರ್ಕಾರದ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಜಂಟಿ ಪರೀಕ್ಷಾ ನಿಯಂತ್ರಕರಾಗಿ ನೇಮಕ ಮಾಡಿರುವುದು ಯಾದಗಿರಿ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಹೇಳಿದರು.

ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಿಇಒ ಲವೀಶ್ ಓರಡಿಯ ಅವರ ವರ್ಗಾವಣೆ ಅಭಿನಂದನಾ ಸಮಾರಂಭದಲ್ಲಿ ಲವೀಶ್ ಓರಡಿಯ ಹಾಗೂ ಅವರ ಪತ್ನಿಯನ್ನು ಸತ್ಕರಿಸಿ ಮಾತನಾಡಿದ ಅವರು, ಕೆಪಿಎಸ್‌ಸಿಯಂತಹ ಮಹತ್ವದ ಸಂಸ್ಥೆಯಲ್ಲಿ ನಡೆಯುವ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಪಾಡಿ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಲವೀಶ್ ಓರಡಿಯ ಅವರಂತಹ ದಕ್ಷ ಅಧಿಕಾರಿಯನ್ನು ಜಂಟಿ ಪರೀಕ್ಷಾ ನಿಯಂತ್ರಕರಾಗಿ ನೇಮಿಸಿರುವುದು ಸಂತಸದ ವಿಚಾರ ಎಂದರು.

ಲವೀಶ್ ಓರಡಿಯ ಅವರ ದಿಟ್ಟ ಹಾಗೂ ಪ್ರಾಮಾಣಿಕ ಸೇವೆ ಯಾದಗಿರಿ ಜಿಲ್ಲೆಯ ಜನರ ಮನಸ್ಸಿನಲ್ಲಿ ಅಚ್ಚಳಿಯದಂತಾಗಿದೆ. ಸುಮಾರು ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳು ಜನರಿಗೆ ಸಮರ್ಪಕವಾಗಿ ಹಾಗೂ ನಿಗದಿತ ಸಮಯದಲ್ಲಿ ತಲುಪುವಂತೆ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ಬಾಬುರಾವ್ ಕಾಡ್ಲೂರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ, ಜನಪರ ಆಡಳಿತಕ್ಕೆ ಆದ್ಯತೆ ನೀಡಿದ ಲವೀಶ್ ಓರಡಿಯ ಅವರು ಪ್ರಾಮಾಣಿಕ ಅಧಿಕಾರಿಯಾಗಿ ಜನಮನದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ವರ್ಗಾವಣೆ ಜಿಲ್ಲೆಯ ಜನರಿಗೆ ಬೇಸರ ತಂದಿದ್ದರೂ, ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಕೆಪಿಎಸ್‌ಸಿಯಲ್ಲಿ ತಮ್ಮ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ ಹಾಗೂ ವಿಶ್ವಾಸ ಮೂಡಿಸುವ ಮೂಲಕ ರಾಜ್ಯದಾದ್ಯಂತ ಉತ್ತಮ ಹೆಸರು ಗಳಿಸಲಿ ಎಂದು ಬಾಬುರಾವ್ ಕಾಡ್ಲೂರ್ ಶುಭ ಹಾರೈಸಿದರು.