
ಧಾರವಾಡ, ಜು.೧೫: ಪ್ರತಿ ವರ್ಷ ಜುಲೈ ೧೧ ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಇಂದು ವಿಶ್ವ ಜನಸಂಖ್ಯೆಯು ಸುಮಾರು ೮.೨ ಬಿಲಿಯನ್ಗಿಂತಲೂ ಹೆಚ್ಚಾಗಿದೆ. ಜನಸಂಖ್ಯೆ ಈ ಆಗಾದ ಬೆಳವಣಿಗೆಯು ನಮಗೆ ಹಲವು ಸವಾಲುಗಳನ್ನು ತಂದೊಡ್ಡಿದೆ. ಅತಿಯಾದ ಜನಸಂಖ್ಯೆಯಿAದಾಗಿ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ, ಪರಿಸರ ಮಾಲಿನ್ಯ, ನಿರುದ್ಯೋಗ, ಬಡತನ ಮತ್ತು ಆಹಾರದ ಕೊರತೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕೆ ಬಡತನ, ಅನಕ್ಷರತೆ ಮತ್ತು ಅರಿವಿನ ಕೊರತೆಯೇ ಮುಖ್ಯ ಕಾರಣಗಳಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಪರಶುರಾಮ ಎಫ್.ಕೆ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಐ.ಇ.ಸಿ. ವಿಭಾಗ, ಜಿಲ್ಲಾ ಕುಟುಂಬ ಕಲ್ಯಾಣ ವಿಭಾಗ, ತಾಲ್ಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಧಾರವಾಡ ಇವರ ಸಹಯೋಗದೊಂದಿಗೆ ಧಾರವಾಡ ನಗರದ ಜೆ.ಎಸ್.ಎಸ್. ಕ್ಯಾಂಪಸ್ನ ಆವರಣದಲ್ಲಿರುವ ಉತ್ಸವ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾವು ಸುಸ್ಥಿರ ಭವಿಷ್ಯವನ್ನು ಹೊಂದಬೇಕಾದರೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯವಾಗಿದೆ. ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯಗಳು ಮತ್ತು ಸಣ್ಣ ಕುಟುಂಬದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ. ಯುವ ಜನಾಂಗವಾದ ನಾವು ಜನಸಂಖ್ಯೆ ಸ್ಪೋಟದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ” ಸಣ್ಣ ಕುಟುಂಬ – ಸುಖೀ ಕುಟುಂಬ” ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳೋಣ, ಸಂಪನ್ಮೂಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಜೀವನವನ್ನು ನೀಡಲು ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಪ್ರಭಾರಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ಮಹೇಶ ಎನ್. ಚಿತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಸೇವೆಗಳನ್ನು ಒದಗಿಸುತ್ತಿದೆ. ತಾತ್ಕಾಲಿಕ ಹಾಗೂ ಶಾಶ್ವತ ಕುಟುಂಬ ಯೋಜನಾ ವಿಧಾನಗಳನ್ನು, ಗರ್ಭಿಣಿಯರ ಆರೈಕೆ, ಸುರಕ್ಷಿತ ಹೆರಿಗೆ, ಮಕ್ಕಳ ಲಸಿಕಾಕರಣ, ಹದಿಹರೆಯದವರ ಆರೋಗ್ಯ ಸೇವಗಳು ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿವೆ ಎಂದು ಹೇಳಿದರು.
ವಿಶೇಷವಾಗಿ ಯುವಜನರು ಮತ್ತು ನವದಂಪತಿಗಳ ವಿವಾಹದ ಸೂಕ್ತ ವಯಸ್ಸು, ಗರ್ಭಧಾರಣೆಯ ನಡುವಿನ ಅಂತರ, ಮಹಿಳೆಯರ ಆರೋಗ್ಯ, ಪೌಷ್ಠಿಕ ಆಹಾರ ಮತ್ತು ಲಿಂಗ ಸಮಾನತೆಯ ಮಹತ್ವವನ್ನು ಅರಿತುಕೊಳ್ಳಬೇಕು. ಆರೋಗ್ಯಕರ ಕುಟುಂಬವೇ ಆರೋಗ್ಯಕರ ಸಮಾಜ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯವಾಗಿದೆ ಎಂದರು.
ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಜುಲೈ ೧೩, ೨೦೨೬ ರಂದು ಪ್ರಬಂಧ ಸ್ಪರ್ದೆ ಏರ್ಪಡಿಸಲಾಗಿತ್ತು. ಒಟ್ಟು ೫೧ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಆಯ್ಕೆಯಾದ ೦೫ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು ಹಾಗೂ ಜನಸಂಖ್ಯಾ ಮಾಹಿತಿಯುಳ್ಳ ಪೋಸ್ಟರ್ ಬಿಡುಗಡೆ ಮಾಡಿದರು.
ಪ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್. ಇಂಡಿಯಾ ಶಾಖೆ ಪ್ರಧಾನ ವ್ಯವಸ್ಥಾಪಕರು ಡಾ. ಸುಜಾತಾ ಆನಿಶೆಟ್ಟರ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸಂಜಯ ಡುಮ್ಮಗೋಳ, ತಾಲೂಕಾ ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್, ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ರವಿವರ್ಮ ಜೋಶಿ, ಡಾ. ಪ್ರಸಾದ ಐ.ಇ.ಆರ್ ಜೆ.ಎಸ್.ಎಸ್. ಅಸೋಸಿಯೇಟ್ ಪ್ರೋಫೆಸರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ ತಿವಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ ಕುಲಕರ್ಣಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬುರ್ಲಿ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್ ಅಗಡಿ ಸ್ವಾಗತಿಸಿದರು, ಉಪನ್ಯಾಸಕಿ ಅನುಷಾ ಎಮ್.ಹೆಚ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.































