Home ಜಿಲ್ಲೆ ಬೆಂಗಳೂರು ವರ್ತೂರು ಕೋಡಿಯಲ್ಲಿ ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ಮೆಚ್ಚುಗೆ

ವರ್ತೂರು ಕೋಡಿಯಲ್ಲಿ ರಾಜಕಾಲುವೆ ಅಭಿವೃದ್ಧಿಗೆ ವಿಶ್ವ ಬ್ಯಾಂಕ್ ಮೆಚ್ಚುಗೆ

ಬೆಂಗಳೂರು, ಸೆ. ೪- ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರು ಕೋಡಿ ವೃತ್ತದಲ್ಲಿ ನವೀನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ರಾಜಕಾಲುವೆ ಕಾಮಗಾರಿಗೆ ವಿಶ್ವ ಬ್ಯಾಂಕ್ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.


ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ (KWSRP) ಅಡಿಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಗಾಗಿ ಆಗಮಿಸಿದ್ದ ವಿಶ್ವ ಬ್ಯಾಂಕ್ ಕಾರ್ಯಪಡೆ, ವಾರ್ತೂರು ಕೋಡಿ ವೃತ್ತದ ಮಳೆನೀರು ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿತು.


ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಯೋಜನಾ ಅನುಷ್ಠಾನ ಘಟಕದ ವತಿಯಿಂದ ಹಿಂದೆ ೭ರಿಂದ ೮ ಮೀಟರ್ ಅಗಲವಿದ್ದ ಮಣ್ಣಿನ ಕಾಲುವೆಯನ್ನು, ಸರ್ಕಾರಿ ಜಮೀನು ಲಭ್ಯವಿರುವ ಕಡೆಗಳಲ್ಲಿ ಸುಮಾರು ೩೦ರಿಂದ ೩೨ ಮೀಟರ್ ಅಗಲದ ಮಳೆನೀರು ಕಾಲುವೆ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗಿದೆ.


ಕಾಲುವೆಯುದ್ದಕ್ಕೂ ಸುಮಾರು ೧ ಕಿಲೋಮೀಟರ್ ಉದ್ದ ಹಾಗೂ ೩.೫ ಮೀಟರ್ ಅಗಲದ ಸಾರ್ವಜನಿಕ ವಾಕಿಂಗ್ ಪಥ ನಿರ್ಮಿಸಿರುವುದು ವಿಶ್ವ ಬ್ಯಾಂಕ್ ತಂಡದ ಪ್ರಮುಖ ಮೆಚ್ಚುಗೆಗೆ ಪಾತ್ರವಾಗಿದೆ.
ಕಾಲುವೆ ಅಗಲೀಕರಣದ ಸಂದರ್ಭದಲ್ಲಿ ಸರ್ಕಾರಿ ಕರಾಬ್ ಜಮೀನನ್ನು ಬಳಸಿಕೊಳ್ಳಲಾಗಿದ್ದು, ಸಾಧ್ಯವಿರುವ ಕಡೆಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸಿ ಕಾಲುವೆ ಕಾರಿಡಾರ್ ಸಂರಕ್ಷಿಸಲಾಗಿದೆ. ಮಳೆನೀರು ಸರಾಗವಾಗಿ ಹರಿಯುವ ವ್ಯವಸ್ಥೆಗೆ ಧಕ್ಕೆಯಾಗದಂತೆ ಸಾರ್ವಜನಿಕರಿಗೆ ವಾಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.


ಭವಿಷ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿಗೆ ಒಳಗಾಗದಂತೆ ತಡೆಯುವ ಉದ್ದೇಶವೂ ವಾಕಿಂಗ್ ಪಥ ನಿರ್ಮಾಣದ ಹಿಂದಿದೆ ಎಂದು ಅಧಿಕಾರಿಗಳು ವಿಶ್ವ ಬ್ಯಾಂಕ್ ತಂಡಕ್ಕೆ ವಿವರಿಸಿದ್ದಾರೆ.
ಇದರ ಜೊತೆಗೆ ಕಾಲುವೆಯುದ್ದಕ್ಕೂ ಹಸಿರೀಕರಣ ಕೈಗೊಳ್ಳಲಾಗಿದ್ದು, ಬಿದಿರು ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡಲಾಗಿದೆ. ಟ್ಯಾಬುಬಿಯಾ ಸೇರಿದಂತೆ ಮರಗಳನ್ನು ಬೆಳೆಸುವ ಮೂಲಕ ಹಸಿರು ಕಾರಿಡಾರ್ ನಿರ್ಮಿಸಲಾಗುತ್ತಿದೆ.


ಮಳೆನೀರು ಕಾಲುವೆ, ಹಸಿರು ಪ್ರದೇಶ ಹಾಗೂ ಸಾರ್ವಜನಿಕ ವಾಕಿಂಗ್ ಪಥದ ಜೊತೆಗೆ ಭವಿಷ್ಯದ ಒಳಚರಂಡಿ ಮೂಲಸೌಕರ್ಯ ನಿರ್ಮಾಣಕ್ಕೂ ಕಾರಿಡಾರ್‌ನಲ್ಲಿ ಅಗತ್ಯ ಸ್ಥಳವನ್ನು ಮೀಸಲಿಡಲಾಗಿದೆ. ಇದರಿಂದ ಮುಂದೆ ಹೊಸದಾಗಿ ನಿರ್ಮಿಸಿರುವ ಸಾರ್ವಜನಿಕ ಸೌಲಭ್ಯಕ್ಕೆ ಅಡ್ಡಿಪಡಿಸದೇ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ.


ಮಳೆನೀರು ಹರಿವು ಸುಧಾರಣೆ, ಸರ್ಕಾರಿ ಜಮೀನು ರಕ್ಷಣೆ, ಹಸಿರು ಪ್ರದೇಶ, ಸಾರ್ವಜನಿಕ ವಾಕಿಂಗ್ ಸೌಲಭ್ಯ ಹಾಗೂ ಭವಿಷ್ಯದ ಮೂಲಸೌಕರ್ಯಕ್ಕೆ ಅವಕಾಶ?ಈ ಎಲ್ಲ ಅಂಶಗಳನ್ನು ಒಂದೇ ಯೋಜನೆಯಲ್ಲಿ ಸಮನ್ವಯಗೊಳಿಸಿರುವ ಕ್ರಮವನ್ನು ವಿಶ್ವ ಬ್ಯಾಂಕ್‌ನ ಪರಿಸರ ಮತ್ತು ಸಾಮಾಜಿಕ ತಜ್ಞರು ಕೂಡ ಶ್ಲಾಘಿಸಿದ್ದಾರೆ.


ಸ್ಥಳೀಯ ನಿವಾಸಿಗಳೂ ವಾಕಿಂಗ್ ಪಥ, ಸುಧಾರಿತ ಮಳೆನೀರು ಹರಿವಿನ ವ್ಯವಸ್ಥೆ ಹಾಗೂ ಹಸಿರೀಕರಣ ಕಾಮಗಾರಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.


ತಾಂತ್ರಿಕ ಹಾಗೂ ಕಾನೂನುಬದ್ಧವಾಗಿ ಸಾಧ್ಯವಿರುವ ಇತರೆ ಸ್ಥಳಗಳಲ್ಲೂ ಇದೇ ಮಾದರಿಯಲ್ಲಿ ರಾಜಕಾಲುವೆ ಕಾರಿಡಾರ್ ಅಭಿವೃದ್ಧಿಪಡಿಸಲು ಜಿಬಿಎ ಹಾಗೂ ಪಿಐಯು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.