
ಕೋಲಾರ,ಸೆ,೫- ನಗರದ ಕಿಲಾರಿಪೇಟೆಯ ಶ್ರೀ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ೬೬ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಗಳಿಂದ ನಡೆದಿದ್ದು, ಶುಕ್ರವಾರ ಸ್ವಾಮಿಯ ಕಲ್ಯಾಣೋತ್ಸವ ಅತ್ಯಂತ ವೈಭವದಿಂದ ನಡೆಯಿತು.
ಗೋಪಾಲಕರ ತವರು ಎಂದೇ ಖ್ಯಾತವಾಗಿರುವ ಕೋಲಾರದ ಕಿಲಾರಿಪೇಟೆಯಲ್ಲಿ ಸಾಂಪ್ರದಾಯಿಕವಾಗಿ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನಡೆದಿದ್ದು, ಮೇಸ್ತ್ರಿ ನಾರಾಯಣಸ್ವಾಮಿ ಮಗಳು ಉಷಾ, ಅಳಿಯ ಶಂಕರ್ ದಂಪತಿಗಳು ಕಲ್ಯಾಣೋತ್ಸವ ನಡೆಸಿಕೊಟ್ಟಿದ್ದು, ಇವರೇ ಈ ಬಾರಿಯೂ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ, ಇಡೀ ದೇವಾಲಯಕ್ಕೆ ಪುಷ್ಪಾಲಂಕಾರ ಮಾಡಿದ್ದು, ಭಾರಿ ಪ್ರಮಾಣದಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿದ್ದು, ಶ್ರದ್ಧಾಭಕ್ತಿಯ ವೈಭವದ ಪೂಜೆಗೆ ಮಾತ್ರ ಅಡ್ಡಿ ಇರಲಿಲ್ಲ.
ಸ್ವಾಮಿಗೆ ಅಲಂಕಾರ ಮುಗಿಯುತ್ತಿದ್ದಂತೆ ನಗರದ ವಿವಿಧ ಬಡಾವಣೆಗಳ ನೂರಾರು ಮಂದಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದು, ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ವಿಶೇಷ ಅಲಂಕಾರ
ಮೂರು ದಿನಗಳಿಂದ ಮುತ್ತೈದೆಯರಿಗೆ ಬಳೆ ತೊಡಿಸುವುದು, ದೀಪೋತ್ಸವ ಸೇವೆ ಸೇರಿದಂತೆ ವಿವಿಧ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಕಿಲಾರಿಪೇಟೆ ಭಕ್ತಾಧಿಗಳು ಸೋಮವಾರ ದೇವಾಲಯದ ಆವರಣದಲ್ಲಿ ಕಲ್ಯಾಣೋತ್ಸವವನ್ನು ನಡೆಸಿದರು.
ನಗರಸಭೆ ಮಾಜಿ ಸದಸ್ಯ ಮೇಸ್ತ್ರಿ ನಾರಾಯಣಸ್ವಾಮಿ ಅವರ ಕುಟುಂಬದವರು, ಮಧ್ಯಾಹ್ನ ದೇವಾಲಯದ ಹೊರಭಾಗದಲ್ಲಿ ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮಂಗಳವಾದ್ಯ, ಮೇಳದೊಂದಿಗೆ ಕಲ್ಯಾಣೋತ್ಸವ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶ್ರೀರುಕ್ಮಿಣಿ ಸತ್ಯಭಾಮ ಶ್ರೀವೇಣುಗೋಪಾಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಕಲ್ಯೋಣೋತ್ಸವದ ನಂತರ ನೆರೆದಿದ್ದ ನೂರಾರು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವೂನಡೆಯಿತು.
ಇಡೀ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿದ್ದು, ನೂರಾರು ಮಂದಿ ಸ್ವಾಮಿಯ ದರ್ಶನ ಪಡೆದರು.ಪ್ರಧಾನ ಅರ್ಚಕರಾದ ರಘುದೀಕ್ಷಿತ್ ಮತ್ತಿತರರು ಕಲ್ಯಾಣೋತ್ಸವ ನಡೆಸಿಕೊಟ್ಟರು.
ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ವರದೇನಹಳ್ಳಿ ವೆಂಕಟೇಶ, ವಕ್ಕಲೇರಿ ರಾಜಪ್ಪ, ನಗರಸಭಾ ಮಾಜಿ ಅಧ್ಯಕ್ಷೆ ಶ್ವೇತಾ ಶಬರೀಷ್, ರಮೇಶ್,ಚೌಡಪ್ಪ, ಮುನಿಸ್ವಾಮಪ್ಪ, ಪುರುಷೋತ್ತಮ್, ಮುನಿವೆಂಕಟಸ್ವಾಮಿ, ವಿಶ್ವನಾಥ್, ರಾಮದಾಸ್,ಮಣಿ, ಮುನಿವೆಂಕಟಯಾದವ್, ಅಡಿಕೆ ನಾರಾಯಣಸ್ವಾಮಿ, ಉಪ್ಪಾರಪೇಟೆ ಮುನಿರಾಜಪ್ಪ, ಗೋವಿಂದಪ್ಪ, ಅಶ್ವಥ್ಥಪ್ಪ, ಕೆ.ಎನ್.ವೆಂಕಟೇಶ್, ಕೆ.ಎಂ.ಮಂಜು, ರಮೇಶ್, ಶಬರಿ, ಪ್ರಭಾಕರ್, ಪೆನುಗೊಂಡ ಕೃಷ್ಣ, ಕೆ.ಎನ್.ಮುನಿಕೃಷ್ಣ,ಕೆಜೆ.ಬಾಬು, ಮುನಿಸ್ವಾಮಿಯಾದವ್ ಸೇರಿದಂತೆ ಕಿಲಾರಿಪೇಟೆಯ ಯಾದವ ಜನಾಂಗದವರು ಸೇರಿದಂತೆ ಕೋಲಾರ ನಗರದ ಪ್ರಮುಖರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
































