Home ಜಿಲ್ಲೆ ಕಲಬುರಗಿ ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಕಲಬುರಗಿ,ಜೂ.26-ಕೌಟುಂಬಿಕ ಕಲಹದ ಹಿನ್ನೆಲೆ ಗರ್ಭಿಣಿ ಮಹಿಳೆಯೊಬ್ಬರು ತಮ್ಮ ಒಂದೂವರೆ ವರ್ಷದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಅಂಬಿಕಾ ವೀರಭದ್ರಪ್ಪ (25) ಹಾಗೂ ಅವರ ಮಗುವನ್ನು ಆರಾಧ್ಯ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಅಂಬಿಕಾ ಅವರು ಮೂರು ವರ್ಷಗಳ ಹಿಂದೆ ಚಿಂಚನಸೂರು ಗ್ರಾಮದ ವೀರಭದ್ರ ಅವರೊಂದಿಗೆ ವಿವಾಹವಾಗಿದ್ದರು. ಮದುವೆಯಾದ ನಂತರ ದಂಪತಿಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದು, ಇದರಿಂದ ಅಂಬಿಕಾ ಮನನೊಂದಿದ್ದರು ಎನ್ನಲಾಗಿದೆ.
ಗುರುವಾರ ಬೆಳಗ್ಗೆ ಅಂಬಿಕಾ ಮನೆಯಿಂದ ಹೊರಟು ಗ್ರಾಮದ ಬಾವಿಯತ್ತ ತೆರಳಿದ್ದಾರೆ. ಬಾವಿ ಬಳಿ ತಮ್ಮ ಚಪ್ಪಲಿಗಳನ್ನು ಬಿಟ್ಟು, ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಬಾವಿಗೆ ಹಾರಿರುವುದು ಬೆಳಕಿಗೆ ಬಂದಿದೆ.
ಬೆಳಗ್ಗೆಯಿಂದ ಅಂಬಿಕಾ ಕಾಣಿಸದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾವಿ ಸಮೀಪ ಚಪ್ಪಲಿಗಳು ಪತ್ತೆಯಾಗಿದ್ದು, ಅನುಮಾನಗೊಂಡ ಸ್ಥಳೀಯರು ಬಾವಿಯಲ್ಲಿ ಶೋಧ ನಡೆಸಿದಾಗ ತಾಯಿ ಮತ್ತು ಮಗುವಿನ ಮೃತದೇಹಗಳು ಪತ್ತೆಯಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.