Home ಜಿಲ್ಲೆ ಕಲಬುರಗಿ ಪತ್ರಕರ್ತರ ವಿರುದ್ಧದ ಸುಳ್ಳು ಪ್ರಕರಣ ಹಿಂಪಡೆಯಿರಿ

ಪತ್ರಕರ್ತರ ವಿರುದ್ಧದ ಸುಳ್ಳು ಪ್ರಕರಣ ಹಿಂಪಡೆಯಿರಿ

ಕಾಳಗಿ: ಜೂ.24:ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಭ್ರಷ್ಟ ಗುತ್ತಿಗೆದಾರರನ್ನು ರಕ್ಷಿಸಿ, ಅಕ್ರಮಗಳನ್ನು ದಾಖಲೆ ಸಮೇತ ಬಯಲಿಗೆಳೆಯುವ ಪ್ರಾಮಾಣಿಕ ಪತ್ರಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಪ್ರಜಾಪ್ರಭುತ್ವ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ ಎಂದು ಪತ್ರಕರ್ತ ಶಿವಕುಮಾರ ಪ್ಯಾಟಿಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು, ಕಲ್ಯಾಣ ಕರ್ನಾಟಕ ನ್ಯೂಸ್ ಚಾನಲ್ ಹಾಗೂ ಕಲ್ಯಾಣ ಜ್ಯೋತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಮಲ್ಲಿಕಾರ್ಜುನ ಪಗಡೆಯವರು ಸಾರ್ವಜನಿಕ ಹಿತಾಸಕ್ತಿಗಾಗಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿನ ಕಳಪೆ ಕಾಮಗಾರಿ, ಭ್ರಷ್ಟಾಚಾರ ಹಾಗೂ ಕೋಟ್ಯಂತರ ರೂಪಾಯಿ ದುರ್ಬಳಕೆಯನ್ನು ದಾಖಲೆಗಳ ಸಮೇತ ಬೆಳಕಿಗೆ ತಂದಿದ್ದಾರೆ. ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳುವವರ ಮುಖವಾಡ ಕಳಚಿದ ಕಾರಣಕ್ಕೆ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.

ಭ್ರಷ್ಟ ಗುತ್ತಿಗೆದಾರರು ಹಾಗೂ ಅವರಿಗೆ ಬೆಂಬಲ ನೀಡುವ ಕೆಲ ಅಧಿಕಾರಿಗಳು ತಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ಪತ್ರಕರ್ತರನ್ನು ಬೆದರಿಸುವ ಉದ್ದೇಶದಿಂದ ಕಾನೂನಿನ ದುರ್ಬಳಕೆ ಮಾಡುತ್ತಿದ್ದಾರೆ. ಇಂತಹ ಪ್ರವೃತ್ತಿ ಮುಂದುವರಿದರೆ ಸಮಾಜದಲ್ಲಿ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ರಮೇಶ ಕುಡ್ಡಳಿ ಮಾತನಾಡಿ, ಮಲ್ಲಿಕಾರ್ಜುನ ಪಗಡೆಯವರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಭ್ರಷ್ಟರನ್ನು ರಕ್ಷಿಸುವ ಬದಲು ಸತ್ಯವನ್ನು ಬಯಲಿಗೆಳೆಯುವ ಪ್ರಾಮಾಣಿಕ ಪತ್ರಕರ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು.
ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಜೆವಾಣಿ ವರದಿಗಾರರಾದ ಶರಣಗೌಡ ಪಾಟೀಲ ಭಂಟನಳ್ಳಿ, ಆನ್ ಸ್ಪಾಟ್ ವರದಿಗಾರರಾದ ಶ್ರೀಶೈಲ ತೇಗಲತ್ತಿಪ್ಪಿ, ವಿಶ್ವವಾಣಿ ವರದಿಗಾರರಾದ ಶ್ರೀಮಂತ ಆರ್ ಮೇಳಕುಂದಿ, ಇಂದ್ರಜಿತ್ ಕಟ್ಟಿಮನಿ, ಮಾರುತಿ ಸೇರಿದಂತೆ ಹಲವರು ಇದ್ದರು.