
ಬೀದರ್, ಸೆ10: ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಪತಿಗೆ ಬೀದರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.
ಬಗದಲ್ ಪೆÇಲೀಸ್ ಠಾಣೆ ವ್ಯಾಪ್ತಿಯ ಔರಾದ್ (ಎಸ್) ಗ್ರಾಮದಲ್ಲಿ 2023ರ ಜೂನ್ 19ರಂದು ಈ ಘಟನೆ ನಡೆದಿತ್ತು. ಗ್ರಾಮದ ಲಕ್ಷ್ಮಿ ಅಲಿಯಾಸ್ ಮಾಲಾ (ಮೃತ) ಅವರನ್ನು ಪತಿ ಅನೀಲಕುಮಾರ ತಂದೆ ಪ್ರಭು ಖರ್ತಾಮಾಳ ಚೂರಿಯಿಂದ ಇರಿದು ಕೊಲೆ ಮಾಡಿದ್ದನು.
ಪ್ರಕರಣದ ವಿವರದಂತೆ, ಲಕ್ಷ್ಮಿ ಅವರಿಗೆ ಪತಿ ಹಾಗೂ ಕುಟುಂಬದವರಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿತ್ತು. ಈ ಸಂಬಂಧ ಅವರು 2018ರಲ್ಲಿ ಬಗದಲ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ನ್ಯಾಯಾಲಯದಲ್ಲಿ ರಾಜಿ ಸಂಧಾನ ನಡೆದು ದಾಂಪತ್ಯ ಜೀವನ ಮುಂದುವರಿದಿತ್ತು.
ಆದರೆ ಘಟನೆಗೂ ಸುಮಾರು 15-20 ದಿನಗಳ ಮೊದಲು ಮತ್ತೆ ಕಿರುಕುಳ ನೀಡಿದ ಆರೋಪಿಗಳು ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಹಾಕಿ, ಮರಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಇದರಿಂದ ಅವರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು.
2023ರ ಜೂನ್ 19ರಂದು ಬೆಳಿಗ್ಗೆ ಮಗಳೊಂದಿಗೆ ಗಂಡನ ಮನೆಗೆ ಬಟ್ಟೆಗಳನ್ನು ತೆಗೆದುಕೊಂಡು ಬರಲು ತೆರಳಿದ್ದಾಗ, 2 ಮತ್ತು 3ನೇ ಆರೋಪಿಗಳು ಆಕೆಯೊಂದಿಗೆ ಜಗಳವಾಡಿದ್ದರು. ಬಳಿಕ ಬೆಳಿಗ್ಗೆ ಸುಮಾರು 10 ಗಂಟೆಗೆ ಪತಿ ಅನೀಲಕುಮಾರ ಮನೆಗೆ ಬಂದಾಗ, ಇತರ ಇಬ್ಬರು ಆರೋಪಿಗಳು ಪತ್ನಿಯಿಂದ ಕುಟುಂಬದ ಮಾನ-ಮರ್ಯಾದೆ ಹಾಳಾಗುತ್ತಿದೆ ಎಂದು ಹೇಳಿ ಆಕೆಯನ್ನು ಕೊಲೆ ಮಾಡುವಂತೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.
ನಂತರ ಅನೀಲಕುಮಾರ ಲಕ್ಷ್ಮಿಗೆ ಎಲ್ಲ ಸಾಮಾನುಗಳನ್ನು ಕೊಡುವುದಾಗಿ ಹೇಳಿ ಕೊಠಡಿಗೆ ಕರೆದುಕೊಂಡು ಹೋಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಈ ಕುರಿತು ಬಗದಲ್ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0044/2023ರಡಿ ಪ್ರಕರಣ ದಾಖಲಾಗಿತ್ತು. ಬೀದರ್ ಗ್ರಾಮೀಣ ವೃತ್ತದ ಪೆÇಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ ವಿ. ಅಲ್ಲಾಸೂರೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೀದರ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸೈಯದ್ ಬಲಿಗುರ್ ರೆಹಮಾನ್ ಅವರು ಅಭಿಯೋಜನೆ ಪರ ಸಾಕ್ಷ್ಯಗಳನ್ನು ಪರಿಗಣಿಸಿ, ಆರೋಪಿ ಅನೀಲಕುಮಾರನಿಗೆ ಭಾರತೀಯ ದಂಡ ಸಂಹಿತೆ ಕಲಂ 302ರಡಿ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದರು. ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದರು.
ಉಳಿದ 2 ಮತ್ತು 3ನೇ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆ ಮಾಡಿದೆ.
ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್ ವಾದ ಮಂಡಿಸಿದ್ದರು.































