
ಕಲಬುರಗಿ:ಮೇ.20: `ಕಲಬುರಗಿಯಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಅರಿವನ್ನು ಬಿತ್ತಿದವರು ಬಿ.ಶ್ಯಾಮಸುಂದರ್ ಅವರು. ಅವರು ಮೂಲತಃ ಔರಂಗಾಬಾದ್‍ನವರು ನಂತರ ಹೈದರಾಬಾದಲ್ಲಿ ನೆಲೆಸಿ ನಿಜಾಮ ಸಂಸ್ಥಾನದಲ್ಲಿ ಉನ್ನತ ಅಧಿಕಾರಿಯಾಗಿದ್ದವರು. ಅವರು ಭೀಮಸೇನೆಯನ್ನು ಕಟ್ಟಿ ಕಲಬುರಗಿ ಭಾಗದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಪರಿಚಯಿಸಿದರು. ನಾವು ಅವರ ಭಾಷಣಗಳನ್ನು ಕೇಳುತ್ತಾ ಡಾ.ಅಂಬೇಡ್ಕರ್ ಬಗೆಗೆ ತಿಳಿದುಕೊಂಡೆವು. ಆದರೆ ನೀವುಗಳು ಡಾ.ಅಂಬೇಡ್ಕರ್ ಕಾಲೇಜಿನ ಮೂಲಕ ಬಾಬಾ ಸಾಹೇಬರ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್ ಅವರು ಮಾತನಾಡಿದರು.
ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಮಾರೋಪ ಸಮಾರಂಭದ ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಜರುಗಿತು. ಅಭಿಯಂತರರಾದ ಮಲ್ಲಿಕಾರ್ಜುನ ಬಳತೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿದ್ದ ಕೆ.ಪಿ.ಇ ಸಂಸ್ಥೆಯ ಆಡಳಿತಾಧಿಕಾರಿಗಲಾದ ಡಾ. ಚಂದ್ರಶೇಖರ ಶೀಲವಂತ ಅವರು `ಇಂದು ಜಗತ್ತಿನಾಧ್ಯಾಂತ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ. ಜಗತ್ತಿನ ನೂರಕ್ಕಿಂತ ಹೆಚ್ಚು ದೇಶಗಳು ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುತ್ತಿವೆ. ಅಂದರೆ ಅಂಬೇಡ್ಕರ್ ಅವರ ವ್ಯಕ್ತಿತ್ವ ಎಷ್ಟು ಉದಾತ್ತವಾಗಿತ್ತು ಎನ್ನುವುದನ್ನು ಇಂದಿನ ವಿದ್ಯಾರ್ಥಿಗಳು ಯೋಚಿಸಬೇಕು, ಇಂದಿನ ವಿದ್ಯಾರ್ಥಿಗಳಿಗೆ ಬಾಬಾ ಸಾಹೇಬ ಅಂಬೇಡ್ಕರರೇ ಪ್ರೇರಣೆಯಾಗಬೇಕು’ ಎಂದರು.
ಕಾಲೇಜಿನ ಚರಿತ್ರೆ ವಿಭಾಗದ ಪ್ರಧ್ಯಾಪಕರು ಮತ್ತು ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕರಾದ ಡಾ.ಗಾಂಧೀಜಿ ಮೊಳೆಕರ್ ಅವರು ಪ್ರಾಸ್ತಾವಿಕವಾಗಿ ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಚಟುವಟಿಕೆಗಳನ್ನು ವಿವರಿಸುತ್ತಾ ಎಲ್ಲರನ್ನು ಸ್ವಾಗತಿಸಿದರು. ಕನ್ನಡ ವಿಭಾಗದ ಡಾ.ವಸಂತ ವಿ. ನಾಶಿ ಅವರು ನಿರೂಪಿಸಿದರು. ಐಕ್ಯುಎಸಿ ನಿರ್ದೇಶಕರಾದ ಡಾ.ಸಿದ್ದಾರ್ಥ ಮದನಕರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಪ್ಪ ಎಸ್.ಕಾಂತ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯ ನಂತರ ಕಲಬುರಗಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಬಂದ 15 ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಷಣ, ಚರ್ಚೆ, ಪ್ರಬಂಧ, ಅಂಬೇಡ್ಕರ್ ಪರ ಗೀತೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಡಾ.ನಿರ್ಮಲಾ ಸಿರಗಾಪುರ, ಡಾ. ಅರುಣ್ ಜೋಳದಕೂಡ್ಲಿಗಿ ಡಾ.ಶಿವಕುಮಾರ್, ಡಾ.ದತ್ತೂರಾಯ, ಡಾ.ಹರ್ಷವರ್ಧನ್, ಡಾ.ಕರಿಬಸಪ್ಪ, ಡಾ.ಅರುಣ್ ಕುಮಾರ್, ಡಾ.ಶಿಲ್ಪ, ಶ್ರೀಮತಿ ಕೌಶಲ್ಯಾ, ಗ್ರಂಥಪಾಲಕರಾದ ಡಾ. ರಮೇಶ ಜಾಬನೂರು, ಗ್ರಂಥ ಸಹಾಯಕರಾದ ಶೃತಿ, ದೊಡ್ಡ ಲಕ್ಷಿ?? ಮಂಜುಳಾ ಉಪಸ್ಥಿತರಿದ್ದರು. ಡಾ.ಸುದರ್ಶನ ಮದನಕರ್ ವಂದಿಸಿದರು.




















