
ವಿಜಯಪುರ:ಮೇ.29:ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ರಾಜ್ಯದ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಯನ್ನು ಕೆ.ಪಿ.ಎಸ್ ಗೆ ವಿಲೀನಗೊಳಿಸಿ ಸಂಪೂರ್ಣವಾಗಿ ಮುಚ್ಚುತ್ತಿರುವುದನ್ನು ಖಂಡಿಸಿ ಅಂಕಲಗಿ ಗ್ರಾಮದ ಇಂಡಿ ವಸ್ತಿ ಶಾಲೆ ಮುಂದೆ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋವಿಂದ ಯಳವಾರ ಅವರು ಮಾತನಾಡುತ್ತಾ, ರಾಜ್ಯ ಸರ್ಕಾರವು ಏPS ಮ್ಯಾಗ್ನೆಟ್ ಶಾಲೆ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ. ಮುಂದುವರೆದು, ಸರ್ಕಾರವು ಪ್ರತಿ ಹಳ್ಳಿಗೆ ಬಸ್ ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಸರ್ಕಾರವು ಒಂದು ಕಡೆ ಒಂದು ಮಗು ಇದ್ದರು ಆ ಶಾಲೆಗೆ ಎಲ್ಲಾ ಸೌಲಭ್ಯ ಕೊಡುತ್ತೇವೆ ಶಾಲೆಯನ್ನು ಮುಚ್ಚೋದಿಲ್ಲ ಎಂದು ಶಿಕ್ಷಣ ಮಂತ್ರಿಗಳು ಪ್ರತಿ ಭಾರಿ ಪತ್ರಿಕಾ ಹೇಳಿಕೆ ಕೊಡುತ್ತಿದ್ದಾರೆ. ಸರ್ಕಾರಕ್ಕೆ ನಿಜವಾಗ್ಲೂ ಕಾಳಜಿ ಇದ್ದರೆ ಈ ಕೂಡಲೇ ಶಾಲೆಗಳನ್ನು ವಿಲೀನ ಮಾಡುವುದಿಲ್ಲ ಅಂತ ಲಿಖಿತ ರೂಪದಲ್ಲಿ ಆದೇಶ ಹೊರಡಿಸಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಉಳಿಸಿ ಸಮಿತಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಬಾಬು ಇಂಡಿ, ಸಿದ್ದಪ್ಪ ಬಿ ದಿಂಡವಾರ, ಬಿ. ಎನ್. ಇಂಡಿ, ಮಾಳಪ್ಪ ಇಂಡಿ, ಶಿವಪ್ಪ ಇಂಡಿ, ಶ್ರೀಶೈಲ್ ಇಂಡಿ, ಚಂದ್ರ ಪೂಜಾರಿ, ವಿದ್ಯಾರ್ಥಿಗಳು ಭಾಗವಹಿಸಿದರು.























