
ನವದೆಹಲಿ, ಜೂ. ೨೩- ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ, ಎಲ್ಲ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತಂದು ವರಿಷ್ಠರ ನಿರ್ದೇಶನವನ್ನು ಪಾಲಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿಂದು ಪಕ್ಷದ ವರಿಷ್ಠ ನಿತಿನ್ ನಬಿನ್ ರವರನ್ನು ಭೇಟಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನದಿಂದ ಆಗಿರುವ ಬೆಳವಣಿಗೆ, ಎಲ್ಲ ಮಾಹಿತಿಗಳನ್ನು ವರಿಷ್ಠರ ಗಮನಕ್ಕೆ ತರುತ್ತೇವೆ. ವರಿಷ್ಠರ ನಿರ್ದೇಶನವನ್ನು ಪಾಲಿಸುತ್ತೇವೆ ಎಂದರು.
ಇಂದು ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಸಭೆ ನಿಗದಿಯಾಗಿದೆ. ಬಳಿಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರವರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವವರನ್ನು ಕ್ಷಮಿಸಲು ಸಾಧ್ಯವಿಲ್ಲ. ಅವರು ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯ ಚುನಾವಣೆ ವೇಳೆ ಭಿಕ್ಷುಕರ ರೀತಿ ತಮ್ಮ ಮುಂದೆ ನಿಂತು ಕಾಡಿ, ಬೇಡಿ ಪಕ್ಷದ ಟಿಕೆಟ್ ತೆಗೆದುಕೊಂಡು ಹೋಗಿ ಗೆದ್ದವರು ಈಗ ಮೋಸ ಮಾಡಿದ್ದಾರೆ. ಇವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.
ನಮ್ಮ ಪಕ್ಷದಲ್ಲಿ ಅಡ್ಡ ಮತದಾನವಾಗಿರುವುದು ಬೇಸರದ ವಿಚಾರ. ಅಡ್ಡ ಮತದಾನ ಮಾಡಿರುವ ಶಾಸಕರಿಗೆ ಡಿ.ಕೆ. ಶಿವಕುಮಾರ್ ರವರು ದುಡ್ಡು ಕೊಟ್ಟು, ಬೆದರಿಸಿ ಮತ ಹಾಕಿಸಿಕೊಂಡಿದ್ದಾರೆ ಎಂದು ಅವರು ದೂರಿದರು.
ಅಡ್ಡ ಮತದಾನ ಮಾಡಿರುವವರನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಆಣೆ ಪ್ರಮಾಣ ಮಾಡಿಸಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ವಿಚಾರ ಇನ್ನು ಅಂತಿಮಗೊಂಡಿಲ್ಲ ಎಂದು ಹೇಳಿದರು.
ಅಡ್ಡ ಮತದಾನದ ಬಗ್ಗೆ ತಮಗೆ ಮಾಹಿತಿ ಇತ್ತು. ಪರಿಷತ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ನಾಯಕರು ಐಷರಾಮಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ರಹಸ್ಯ ಸಭೆ ನಡೆಸಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಹೇಳಿಕೆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಆರ್. ಅಶೋಕ್ ತಿಳಿಸಿದರು.




























