
ನವದೆಹಲಿ.ಜೂ. ೨೩: ರಾಜ್ಯಸಭೆ ಸದಸ್ಯತ್ವದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ತಮ್ಮ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ ವಿಧಿ ೭೫(೨)ರ ಅನ್ವಯ ಕುರಿಯನ್ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
೨೦೨೪ರ ಜೂನ್‌ನಲ್ಲಿ ಪ್ರಧಾನಿ ಮೋದಿಯವರ ೩ನೇ ಅವಧಿಯ ಸಚಿವ ಸಂಪುಟಕ್ಕೆ ಜಾರ್ಜ್ ಕುರಿಯನ್ ಅನಿರೀಕ್ಷಿತವಾಗಿ ಸೇರ್ಪಡೆಯಾಗಿದ್ದರು. ಸಚಿವರಾದ ಸಂದರ್ಭದಲ್ಲಿ ಅವರು ಸಂಸತ್ತಿನ ಯಾವುದೇ ಸದನದ ಸದಸ್ಯರಾಗಿರಲಿಲ್ಲ. ತಬಲಬಿಕಾ ಸಂವಿಧಾನದ ನಿಯಮಾವಳಿಗಳನ್ನು ಪೂರೈಸಲು, ಆಗಸ್ಟ್ ೨೦೨೪ರಲ್ಲಿ ಮಧ್ಯಪ್ರದೇಶದ ರಾಜ್ಯಸಭಾ ಉಪಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಜ್ಯೋತಿರಾದಿತ್ಯ ಸಿಂದಿಯಾ ಅವರು ಲೋಕಸಭೆಗೆ ಆಯ್ಕೆಯಾದ ನಂತರ ತೆರವಾಗಿದ್ದ ಸ್ಥಾನಕ್ಕೆ ಕುರಿಯನ್ ಸ್ಪರ್ಧಿಸಿದ್ದರು. ಸಿಂದಿಯಾ ಅವರ ಬಾಕಿ ಅವಧಿಗೆ ಮಾತ್ರ ಆಯ್ಕೆಯಾಗಿದ್ದರಿಂದ, ಕುರಿಯನ್ ಅವರ ಸದಸ್ಯತ್ವದ ಅವಧಿ ಜೂನ್ ೨೦೨೬ಕ್ಕೆ ಮುಕ್ತಾಯಗೊಂಡಿದೆ.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್ ಅವರಿಗೆ ಮತ್ತೆ ಟಿಕೆಟ್ ನೀಡದೆ, ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸಂವಿಧಾನದ ನಿಯಮಗಳ ಪ್ರಕಾರ ಸಂಸದರಲ್ಲದ ವ್ಯಕ್ತಿ ಗರಿಷ್ಠ ೬ ತಿಂಗಳವರೆಗೆ ಸಚಿವರಾಗಿ ಮುಂದುವರಿಯಲು ಅವಕಾಶವಿದ್ದರೂ, ಕುರಿಯನ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಅವಧಿ ಮುಗಿಯುತ್ತಿದ್ದಂತೆಯೇ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇದರೊಂದಿಗೆ ಅವರ ೨ ವರ್ಷಗಳ ಕೇಂದ್ರ ಸಚಿವ ಅವಧಿ ಕೊನೆಗೊಂಡಂತಾಗಿದೆ.
೧೯೮೦ರಲ್ಲಿ ಬಿಜೆಪಿ ಸ್ಥಾಪನೆಯಾದ ದಿನದಿಂದಲೂ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಕೇರಳದಲ್ಲಿ ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಪಕ್ಷದ ನೆಲೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾನೂನು ಪದವೀಧರರಾಗಿರುವ ಇವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.




























