Home ಮುಖಪುಟ ಸುದ್ದಿ ವಿಧಾನಸೌಧ ಹೊರಗಡೆ ಚರ್ಚೆ ಸೂಕ್ತ

ವಿಧಾನಸೌಧ ಹೊರಗಡೆ ಚರ್ಚೆ ಸೂಕ್ತ

ಬಿಡದಿ ಟೌನ್‌ಶಿಪ್

ಬೆಂಗಳೂರು, ಜೂ. ೨೩- ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ವಿಧಾನಸೌಧದ ಬದಲು ರೈತರ ಸಮ್ಮುಖದಲ್ಲೇ ವಿಧಾನಸೌಧದ ಹೊರಗಡೆ ಚರ್ಚೆ ನಡೆಸುವುದು ಸೂಕ್ತ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.


ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ತಮಗೆ ಆಹ್ವಾನ ನೀಡಿದ್ದಾರೆ. ನನ್ನ ಪ್ರಕಾರ ವಿಧಾನಸೌಧದಲ್ಲಿ ಚರ್ಚೆ ನಡೆಸಿದರೆ ಪ್ರಯೋಜನವಿಲ್ಲ. ಈ ಟೌನ್‌ಶಿಪ್‌ನಿಂದ ಭೂಮಿ ಕಳೆದುಕೊಳ್ಳುವ ರೈತರ ಜತೆ ಅವರ ಸ್ಥಳದಲ್ಲೆ ಚರ್ಚೆ ನಡೆಸಿದರೆ ತಾರ್ಕಿಕ ಆಂತ್ಯ ಕಾಣಬಹುದು. ಹಾಗಾಗಿ ವಿಧಾನಸೌಧದ ಹೊರಗಡೆ ಚರ್ಚೆ ನಡೆಸುವುದು ಹೆಚ್ಚು ಸೂಕ್ತ ಎಂದು ಅವರು ಹೇಳಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ತಿಂಗಳ ೨೬ ರಂದು ಚರ್ಚೆಗೆ ಬರುವಂತೆ ನನಗೆ ಆಹ್ವಾನ ನೀಡಿದ್ದಾರೆ. ೨೬ ರಂದು ನನಗೆ ಪೂರ್ವನಿಗದಿತ ಕಾರ್ಯಕ್ರಮಗಳಿವೆ. ಹಾಗಾಗಿ ಜೂ. ೨೭ ರಂದು ಚರ್ಚೆಗೆ ನಾನು ಸಿದ್ಧ. ಆದರೆ ವಿಧಾನಸೌಧದಲ್ಲಿ ಚರ್ಚೆ ಬೇಡ. ಭೂಮಿ ಕಳೆದುಕೊಳ್ಳುವ ರೈತರ ಸಮ್ಮುಖದಲ್ಲೇ ಚರ್ಚೆ ಆಗಬೇಕು ಎಂದು ಅವರು ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನಗೆ ಬರೆದಿರುವ ಪತ್ರದಲ್ಲಿ ನಿಮ್ಮ ತಂಡದ ಐದು ಜನ ವಿಧಾನಸೌಧಕ್ಕೆ ಚರ್ಚೆಗೆ ಬನ್ನಿ ಎಂದು ಬರೆದಿದ್ದಾರೆ. ನನಗೆ ಯಾವ ತಂಡನೂ ಇಲ್ಲ. ಇರುವುದು ರೈತರ ಪರ ತಂಡ ಅಷ್ಟೆ. ಅವರಿಗೆ ತಂಡ ಇರಬಹುದೇನೋ ಎಂದು ತಿರುಗೇಟು ನೀಡಿದರು.


ನಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಈ ತಿಂಗಳ ೨೭ ರಂದು ಚರ್ಚೆಗೆ ಸಿದ್ಧ ಎಂದು ಹೇಳಿದ್ದೇನೆ. ಸವಾಲು-ಪ್ರತಿಸವಾಲು. ಪಂದ್ಯಾಹ್ವಾನ ಯಾವುದೂ ಇಲ್ಲ. ಯಾವ ಪ್ರತಿಷ್ಠೆನೂ ಇಲ್ಲ, ಯಾರ ಹೆಸರು ಕೆಡಿಸುವ ಉದ್ದೇಶವೂ ಇಲ್ಲ. ನೊಂದ ರೈತರ ಧ್ವನಿಯಾಗಿ ನಾನು ಮಾತನಾಡುತ್ತಿದ್ದೇನೆ ಅಷ್ಟೆ ಎಂದರು


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಯೋಜನೆ ನನ್ನ ಯೋಜನೆ. ಅದನ್ನು ನಾನು ಮುಂದುವರೆಸತ್ತಿದ್ದೆ ಎಂದೆಲ್ಲಾ ಹೇಳುತ್ತಿದ್ದಾರೆ. ಅದೆಲ್ಲಾ ಯಾರ ಯೋಜನೆ, ಯಾರಿಂದ ಏನಾಯ್ತು, ಇದೆಲ್ಲಾ ಬೇಡ. ರೈತರಿಗೆ ತೊಂದರೆಯಾಗಬಾರದು ಅಷ್ಟೇ. ರೈತರ ಪ್ರಕಾರ ಶೇ. ೮೦ ಕ್ಕೂ ಹೆಚ್ಚ ರೈತರು ಭೂಮಿ ಕೊಡಲು ಒಪ್ಪಿಲ್ಲ. ಆದರೆ ಮುಖ್ಯಮಂತ್ರಿಗಳ ಪ್ರಕಾರ ಶೇ. ೮೦ ರಷ್ಟು ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ರೈತರ ಸಮುಮುಖದಲ್ಲೇ ಬಗೆಹರಿಸೋಣ ಎಂದರು.


ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಭೂಸ್ವಾದೀನ ಮಾಡುವುದಕ್ಕೆ ನನ್ನ ವಿರೋಧ. ಸುಮಾರು ೪೫೦ ದಿನಗಳಿಂದ ರೈತರು ಭೂಸ್ವಾದೀನದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹೀಗಿದ್ದರೂ ಸುಮ್ಮನೆ ಅನಗತ್ಯ ಗೊದಂಲ ಸೃಷ್ಟಿಸಿ, ರೈತರು ಒಪ್ಪಿದ್ದಾರೆ ಎಂದೆಲ್ಲಾ ಹೇಳುವುದು ಸರಿ ಕಾಣಲ್ಲ ಎಂದರು.


ಎಲ್ಲವೂ ಸಂತ್ರಸ್ತ ರೈತರ ಸಮ್ಮುಖದಲ್ಲೇ ಚರ್ಚೆಯಾಗಿ ಬಗೆಹರಿಸಬೇಕು. ಹಾಗಾಗಿ ವಿಧಾನಸೌಧದ ಬದಲು ರೈತರ ಸಮ್ಮುಖದಲ್ಲಿ ಬಹಿರಂಗ ಚರ್ಚೆ ನಡೆಯಬೇಕು. ಈ ತಿಂಗಳ ೨೭ ರಂದು ಚರ್ಚೆಗೆ ಸಮಯ ನಿಗದಿ ಮಾಡಿದರೆ ಒಳ್ಳೆಯದು ಎಂದು ಕುಮಾರಸ್ವಾಮಿ ತಿಳಿಸಿದರು.