Home ಜಿಲ್ಲೆ ಸಿಕ್ಕ ಸ್ವಾತಂತ್ರ‍್ಯವನ್ನು ಉಳಿಸಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು: ನ್ಯಾಯಾಧೀಶ ಮರುಳಸಿದ್ದರಾಧ್ಯ

ಸಿಕ್ಕ ಸ್ವಾತಂತ್ರ‍್ಯವನ್ನು ಉಳಿಸಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು: ನ್ಯಾಯಾಧೀಶ ಮರುಳಸಿದ್ದರಾಧ್ಯ

ಯಾದಗಿರಿ: ಲಕ್ಷಾಂತರ ಜನರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ದೊರೆತ ಸ್ವಾತಂತ್ರ‍್ಯವನ್ನು ಸಂರಕ್ಷಿಸಿ, ಮತ್ತಷ್ಟು ಬಲಪಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದರಾಧ್ಯ ಹೆಚ್.ಜೆ. ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ೮೦ನೇ ಸ್ವಾತಂತ್ರ‍್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಬಳಿಕ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ದೇಶದ ಗಡಿ ಹಾಗೂ ಜನರ ಸುರಕ್ಷತೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಸೈನಿಕರ ಸೇವೆ ಅತ್ಯಂತ ಅಮೂಲ್ಯವಾದದ್ದು. ಅದೇ ರೀತಿ ನಗರ ಹಾಗೂ ಗ್ರಾಮಗಳ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಜನರ ಸಮಸ್ಯೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ಜವಾಬ್ದಾರಿಯೂ ಮಹತ್ವಪೂರ್ಣವಾಗಿದೆ. ಈ ಮೂರು ಕ್ಷೇತ್ರಗಳಲ್ಲಿ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಾಧಕರನ್ನು ಸನ್ಮಾನಿಸಲಾಗಿದೆ ಎಂದು ಹೇಳಿದರು.

ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ-ಬಲಿದಾನವನ್ನು ಸದಾ ಸ್ಮರಿಸುವುದರ ಜೊತೆಗೆ, ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಕಾನೂನು ವ್ಯವಸ್ಥೆಯನ್ನು ಗೌರವಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ನ್ಯಾಯಾಧೀಶರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಅರುಣ ಬಾಳಾಸಾಹೇಬ್ ವಡವಾಡೆ, ಹಿರಿಯ ಸಿವಿಲ್ ನ್ಯಾಯಾಧೀಶ ಬಾಳಾಸಾಹೇಬ್ ವಡವಾಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪಾಟೀಲ್, ಉಪಾಧ್ಯಕ್ಷ ದೇವೇಂದ್ರ ಯರಗೋಳ, ಜಿಲ್ಲಾ ಕಾರ್ಯದರ್ಶಿ ಗೋವಿಂದ ಜಾಧವ್, ಮಹಿಳಾ ಉಪಾಧ್ಯಕ್ಷೆ ನಾಗರತ್ನ ಅನಪುರ ಸೇರಿದಂತೆ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ವಕೀಲರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ದೇಶ ಸೇವೆಯಲ್ಲಿ ಸಲ್ಲಿಸಿದ ಕೊಡುಗೆಯನ್ನು ಗುರುತಿಸಿ ಮಾಜಿ ಸೈನಿಕರಾದ ನಿಂಗನಗೌಡ ಪಾಟೀಲ್, ಆನಂದ ಮಿರ್ಚಿ ಹಾಗೂ ಭೀಮರಾಯ ಭಂಕ್ಲಿ ಅವರನ್ನು ಸನ್ಮಾನಿಸಲಾಯಿತು.

ಸಮಾಜಕ್ಕೆ ನಿಖರ ಮಾಹಿತಿಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪತ್ರಕರ್ತರಾದ ಎಸ್.ಎಸ್. ಮಠ, ಆನಂದ ಸೌದಿ ಹಾಗೂ ಶರಣು ಗೊಬ್ಬುರ ಅವರನ್ನು ಗೌರವಿಸಲಾಯಿತು. ನಗರ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಾದ ತಾಯಪ್ಪ ನಾಯ್ಕಲ್ ಹಾಗೂ ಮಲ್ಲಪ್ಪ ಅವರನ್ನೂ ಸನ್ಮಾನಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.