
ಯಾದಗಿರಿ: ತಾಲೂಕಿನ ಯಡ್ಡಳ್ಳಿ ಗ್ರಾಮದ ಕೆರೆಗೆ ಕೃಷ್ಣ ಭಾಗ್ಯ ಜಲ ನಿಗಮದ ವತಿಯಿಂದ ಸನ್ನತಿ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪೈಪ್‍ಲೈನ್ ಮೂಲಕ ಕೆರೆಗೆ ನೀರು ಹರಿದು ಬರುತ್ತಿದ್ದಂತೆ ಗ್ರಾಮದ ರೈತರಲ್ಲಿ ಸಂತಸ ಮನೆ ಮಾಡಿದ್ದು, ನೀರು ಒದಗಿಸಲು ಕಾರಣರಾದವರಿಗೆ ಅಭಿನಂದನೆ ಸಲ್ಲಿಸಿದರು.
ಮಳೆ ಕೊರತೆಯಿಂದ ಕೆರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರಲಿಲ್ಲ. ಇದರಿಂದ ಭತ್ತ ನಾಟಿ ಮಾಡಿದ್ದ ರೈತರು ಬೆಳೆ ಉಳಿಸಿಕೊಳ್ಳುವ ಬಗ್ಗೆ ಆತಂಕದಲ್ಲಿದ್ದರು. ಇದೀಗ ಸನ್ನತಿ ಏತ ನೀರಾವರಿ ಯೋಜನೆಯ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿರೀಕ್ಷೆ ಮೂಡಿದೆ.
ಕೆರೆಗೆ ನೀರು ಹರಿದು ಬರುತ್ತಿದ್ದಂತೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಭತ್ತದ ಬೆಳೆ ಉಳಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆರೆಗೆ ನೀರು ಹರಿಸಲು ಕಾರಣರಾದ ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ಅವರ ಪ್ರಯತ್ನಕ್ಕೆ ರೈತರು ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ನೀರು ಹರಿಸುವ ಕಾರ್ಯಕ್ಕೆ ಬೆಂಬಲವಾಗಿ ನಿಂತ ಗ್ರಾಮದ ಕಾಂಗ್ರೆಸ್ ಮುಖಂಡರಾದ ವೀರಭದ್ರಪ್ಪ ಯಡ್ಡಳ್ಳಿ, ನಾಗರೆಡ್ಡಿ ಕೊನೆಪುರ್, ಹೊನ್ನಪ್ಪ ಎಸ್. ನಾಟೇಕರ್, ಯಲ್ಲಪ್ಪ ಮಣೆನೋರ್, ಭೀಮರಾಯ ಮಣೆನೋರ್, ಅಮ್ಮುಸೇನ್ ಚೌದ್ರಿ, ಜಗಪ್ಪ ಮಡಿವಾಳ, ಅರ್ಜುನ್ ಹೊಸಮನಿ, ದೇವಪ್ಪ ನಾಯ್ಕೋಡಿ, ಸಣ್ಣ ಹಣಮಂತ ಬಂದಳ್ಳಿಕರ್, ಚಂದ್ರಶೇಖರ ಹೊಸಮನಿ, ನಾಗಪ್ಪ ಮಣೆನೋರ್, ಮಲ್ಲಪ್ಪ ಮಣೆನೋರ್, ಸಾಬಣ್ಣ ಎಚ್. ನಾಟೇಕಾರ್, ಹಂಪಯ್ಯ ನಾಟೇಕಾರ್, ದೊಡಪ್ಪ ನೀರಡಗಿ, ಚಂದ್ರು ಮಡಿವಾಳ, ಜಗಪ್ಪ ಕಳ್ಳೇರ್, ಹೊನ್ನಪ್ಪ ಬಿ. ನಾಟೇಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ ಭತ್ತದ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.





























