
ಗದಗ, ಆ. ೮: ನಗರದ ಬಳಗಾನೂರ ರಸ್ತೆಯಲ್ಲಿರುವ ಘನ ತ್ಯಾಜ್ಯ (ಕಸ) ನಿರ್ವಹಣಾ ಕೇಂದ್ರಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಗುರುವಾರ ದಿಢೀರ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಈ ವೇಳೆ ಕಸ ನಿರ್ವಹಣೆ, ವಿಂಗಡಣೆ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಅವಲೋಕಿಸಿದ ಅವರು, ನಗರಸಭೆಯು ಕಸ ನಿರ್ವಹಣೆಯನ್ನು ವೈಜ್ಞಾನಿಕ ಹಾಗೂ ನಿಯಮಾನುಸಾರ ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮನೆಮನೆಗಳಿಂದ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಂಗಡಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು. ಕಸ ನಿರ್ವಹಣಾ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ತ್ವರಿತವಾಗಿ ಸರಿಪಡಿಸಿ ಸುಧಾರಿತ ವ್ಯವಸ್ಥೆ ರೂಪಿಸುವಂತೆ ಸೂಚಿಸಿದರು.
ಕಸ ವಿಂಗಡಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡವನ್ನು ಮೈಸೂರಿಗೆ ಕಳುಹಿಸಿ ತರಬೇತಿ ನೀಡುವಂತೆ ಸೂಚಿಸಿದರು. ಅಲ್ಲಿನ ಯಶಸ್ವಿ ಮಾದರಿಯನ್ನು ಅಧ್ಯಯನ ಮಾಡಿ ಗದಗದಲ್ಲಿಯೂ ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಕಸ ವಿಲೇವಾರಿ ಕೇಂದ್ರದ ಸುತ್ತಮುತ್ತ ಯಾವುದೇ ಹೊಸ ಬಡಾವಣೆಗಳಿಗೆ ಅವಕಾಶ ನೀಡಬಾರದು. ಕೇಂದ್ರದಿAದ ಹೊರಹೊಮ್ಮುವ ದುರ್ವಾಸನೆ, ಧೂಳು ಅಥವಾ ಇತರ ತೊಂದರೆಗಳಿAದ ಸುತ್ತಮುತ್ತಲಿನ ರೈತರು, ಸಾರ್ವಜನಿಕರು ಹಾಗೂ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು. ಅವರಿಗೆ ಗುಣಮಟ್ಟದ ಮಾಸ್ಕ್, ಬೂಟ್, ಕೈಗವಸು ಸೇರಿದಂತೆ ಅಗತ್ಯ ಸುರಕ್ಷತಾ ಸಲಕರಣೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಅಲ್ಲದೆ ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದರು.
ಪರಿಶೀಲನೆ ವೇಳೆ ಕಳೆದ ಆರು ವರ್ಷಗಳಿಂದ ಕಸ ವಿಲೇವಾರಿ ಯಂತ್ರ ಕೆಟ್ಟು ನಿಂತಿರುವ ವಿಷಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಇಷ್ಟು ವರ್ಷಗಳಾದರೂ ಯಂತ್ರವನ್ನು ದುರಸ್ತಿ ಮಾಡಿಸದಿರುವ ಕಾರಣವನ್ನು ಪ್ರಶ್ನಿಸಿದರು. ತಕ್ಷಣವೇ ಆಧುನಿಕ ತಂತ್ರಜ್ಞಾನ ಹೊಂದಿರುವ ಹೊಸ ಕಸ ವಿಲೇವಾರಿ ಯಂತ್ರವನ್ನು ಖರೀದಿಸಿ ಕಾರ್ಯಾರಂಭ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಸ ನಿರ್ವಹಣೆ ಮತ್ತು ವಿಲೇವಾರಿ ಕಾರ್ಯಗಳು ಪರಿಸರ ಸ್ನೇಹಿ ಹಾಗೂ ಕಾನೂನುಬದ್ಧವಾಗಿ ನಡೆಯಬೇಕು. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗೆ ಧಕ್ಕೆ ಉಂಟಾಗದ ರೀತಿಯಲ್ಲಿ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ ಆರ್. ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಲೋಕಾಯುಕ್ತ ಉಪಾಧೀಕ್ಷಕ ಲೋಕೆಶ್, ಡಿಯುಡಿಸಿ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ಆನಂದ ಬದಿ, ನಗರಸಭೆ ಆಯುಕ್ತ ರಾಜಾರಾಮ ಪವಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




























