
ಬೀದರ: ಕರ್ನಾಟಕ ರಾಜ್ಯದಲ್ಲಿ ವಿದ್ಯುಚ್ಛಕ್ತಿ ವಿತರಣಾ ಕ್ಷೇತ್ರವನ್ನು ಖಾಸಗೀಕರಣಗೊಳಿಸದೆ, ಸರ್ಕಾರದ ಅಧೀನದಲ್ಲಿಯೇ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬೀದರ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳು ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು, ರೈತರು ಹಾಗೂ ಕೈಗಾರಿಕೋದ್ಯಮಿಗಳಿಗೆ ಸಮರ್ಪಕ ಸೇವೆ ಒದಗಿಸುತ್ತಿವೆ ಎಂದು ತಿಳಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿದ್ಯುತ್ ವಿತರಣಾ ಕಂಪನಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಅವಕಾಶ ನೀಡಿದರೆ ಸರ್ಕಾರದ ನೇರ ನಿಯಂತ್ರಣ ಕಡಿಮೆಯಾಗಲಿದ್ದು, ಸಾರ್ವಜನಿಕರು, ರೈತರು ಹಾಗೂ ಕೈಗಾರಿಕೆಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದ್ದಾರೆ.
ಟಾಟಾ ಪವರ್ ಕಂಪನಿಯವರು ಸಲ್ಲಿಸಿರುವ ಅರ್ಜಿಯನ್ನು ವಿದ್ಯುಚ್ಛಕ್ತಿ ಕಾಯ್ದೆ-2003ರ ಸೆಕ್ಷನ್ 108ರ ಅನ್ವಯ ತಿರಸ್ಕರಿಸಿ, ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸರ್ಕಾರದ ಅಧೀನದಲ್ಲಿಯೇ ಮುಂದುವರಿಸುವಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೇಡಿಕೆಗಳನ್ನು ಸರ್ಕಾರ ಪರಿಗಣಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ರಾಜ್ಯ ಕಾರ್ಯದರ್ಶಿ (ಮಹಿಳಾ ಘಟಕ) ಶೋಭಾವತಿ ಕಾರಭಾರಿ, ರಾಜ್ಯ ಪ್ರತಿನಿಧಿ ಶೇಷರಾವ ಕಣಜಿ, ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾನಂದಾ ದೇಶಮುಖ, ಜಿಲ್ಲಾ ಉಪಾಧ್ಯಕ್ಷರಾದ ಶಂಕರೆಪ್ಪಾ ಪಾರಾ ಹಾಗೂ ಸಿದ್ದಣ್ಣಾ ಭೂಶೆಟ್ಟಿ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಾಬುರಾವ ಜೋಳದಾಬಕಾ, ಕಮಲನಗರ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಬಸವಕಲ್ಯಾಣ ಅಧ್ಯಕ್ಷ ಸುಭಾಷ ರಗಟೆ, ಬೀದರ ಅಧ್ಯಕ್ಷ ನಾಗಯ್ಯ ಸ್ವಾಮಿ, ಔರಾದ ಅಧ್ಯಕ್ಷ ಪ್ರಕಾಶ ಬಾವಗೆ, ಹುಮನಾಬಾದ ಅಧ್ಯಕ್ಷ ಸತೀಶ ನನ್ನೂರೆ, ಔರಾದ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ದೇಶಮುಖ, ಭಾಲ್ಕಿ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಬಳತೆ ಹಾಗೂ ಭಾಲ್ಕಿ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ವನಿತಾ ಮಾಶೆಟ್ಟೆ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದದರು.


























