
ಬೆಂಗಳೂರು,ಜೂ.೧೮: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಐವರು, ಬಿಜೆಪಿಯ ಇಬ್ಬರು ಗೆಲುವು ಸಾಧಿಸಿದ್ದು, ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಈ ದಿಗ್ವಿಜಯದ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಗೆ ಡಿ.ಕೆ.ಶಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇಡೀ ದೇಶದಲ್ಲಿ ಎದುರಾಳಿ ಪಕ್ಷಗಳನ್ನು ಧೂಳೀಪಟ ಮಾಡುತ್ತಿರುವ ಬಿಜೆಪಿಗೆ ಈ ಸೋಲು ಭಾರೀ ಹಿನ್ನೆಡೆಯುಂಟು ಮಾಡಿದ್ದು, ಬಿಜೆಪಿ ಹೈಕಮಾಂಡ್ ಗೆ ತೀವ್ರ ಹಿನ್ನೆಡೆಯುಂಟು ಮಾಡಿದೆ.
ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ತಿಪ್ಪಣ್ಣಪ್ಪ ಕಮಕನೂರು, ಮಾಳವಳ್ಳಿ ಶಿವಣ್ಣ ಹಾಗೂ ೫ನೇ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಗೆದ್ದಿದ್ದಾರೆ. ಬಿಜೆಪಿಯ ರಘುಕೌಟಿಲ್ಯ ಗೆದ್ದಿದ್ದು, ಲಿಂಗರಾಜ್ ಪಾಟೀಲ್ ಗೆ ಪ್ರಯಾಸದ ಗೆಲುವು ಪ್ರಾಪ್ತವಾಗಿದೆ. ಜೆಡಿಎಸ್ ನ ಗೋವಿಂದರಾಜ್ ಹೀನಾಯವಾಗಿ ಪರಾಭವಗೊಂಡಿದ್ದಾರೆ. ವಿನಯ್ ಕಾರ್ತಿಕ್ ಅತ್ಯಧಿಕ ೩೨ ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಿಂದಲೂ ಅಡ್ಡ ಮತದಾನವಾಗಿದೆ. ಬಿಜೆಪಿಯಿಂದ ೩ ಮತ್ತು ಜೆಡಿಎಸ್ ನಿಂದ ೭ ಮತಗಳು ಕಾಂಗ್ರೆಸ್ ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರಿಗೆ ದೊರೆತಿದೆ. ವಿನಯ್ ಕಾರ್ತಿಕ ಗರಿಷ್ಠ ೨೮ ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿದ್ದರು. ಆದರೆ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಒಂದು ಮತ ಅಸಿಂಧುವಾಗಿದೆ. ಬಿಜೆಪಿಯ ಲಿಂಗರಾಜ್ ಪಾಟೀಲ್ ಕೇವಲ ೨೭ ಮತಗಳನ್ನು ಪಡೆದಿದ್ದು, ಅವರಿಗೆ ಮೂರು ಮತಗಳು ಕಡಿಮೆಯಾಗಿವೆ. ಇದು ಬಿಜೆಪಿಗೆ ನಾಯಕತ್ವಕ್ಕೆ ತೀವ್ರ ಆತಂಕ ಮೂಡಿಸಿದೆ.

ಆಡಳಿತರೂಢ ಕಾಂಗ್ರೆಸ್ ಪಕ್ಷವು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದು, ತನ್ನ ಐದು ಅಭ್ಯರ್ಥಿಗಳನ್ನು ಅಧಿಕೃತವಾಗಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೊನೆಯ ಕ್ಷಣದವರೆಗೂ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಹೈವೋಲ್ಟೇಜ್ ಕಣದಲ್ಲಿ, ಮೈತ್ರಿಕೂಟದ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರು ತೀವ್ರ ಮುಖಭಂಗ ಅನುಭವಿಸಿ ಸೋಲೊಪ್ಪಿಕೊಂಡಿದ್ದಾರೆ. ಈ ಫಲಿತಾಂಶವು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಈ ಅಚ್ಚರಿಯ ಫಲಿತಾಂಶಕ್ಕೆ ಪ್ರಮುಖ ಕಾರಣ ವಿರೋಧ ಪಕ್ಷಗಳ ಪಾಳಯದಲ್ಲಿ ನಡೆದಿರುವ ಭಾರೀ ಪ್ರಮಾಣದ ಅಡ್ಡಮತದಾನ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಹಲವು ಶಾಸಕರು ತಮ್ಮ ಪಕ್ಷದ ಅಧಿಕೃತ ಸೂಚನೆಯನ್ನು ಧಿಕ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಅಡ್ಡಮತದಾನ ಮಾಡಿದ್ದಾರೆ. ಚುನಾವಣಾ ಕಣದಲ್ಲಿ ತಮ್ಮ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಉಭಯ ಪಕ್ಷಗಳ ನಾಯಕರಿಗೆ ಈ ಅಡ್ಡಮತದಾನದ ಬೆಳವಣಿಗೆಯು ಅಕ್ಷರಶಃ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜೆಡಿಎಸ್ ನ ಗೋವಿಂದ ರಾಜ್ ತಮ್ಮ ಪಕ್ಷದ ೧೯ ಸೇರಿ ಕನಿಷ್ಠ ೨೦ ಮತಗಳು ದೊರೆಯುವ ನಿರೀಕ್ಷೆ ಹೊಂದಿದರು. ಆದರೆ ಗೋವಿಂದರಾಜ್ ಕೇವಲ ೧೪ ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ತಾಂತ್ರಿಕ ಮತ್ತು ವ್ಯೂಹಾತ್ಮಕ ಹೆಜ್ಜೆ ಇಟ್ಟು ಬಿಜೆಪಿ ಮತ್ತು ಜೆಡಿಎಸ್ ಗೆ ತೀವ್ರ ಹಿನ್ನೆಡೆಯುಂಟು ಮಾಡಿದೆ. ಇದು ಎರಡೂ ಪಕ್ಷಗಳಿಗೂ ಕರೆಗಂಟೆಯಾಗಿ ಪರಿಣಮಿಸಿದೆ.
ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೆಡ್ಡು ಹೊಡೆದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮುಖಭಂಗವಾಗಿದೆ. ಈ ಮೂಲಕ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಎಚ್.ಡಿ.ಕೆಗೆ ತೀವ್ರ ಹಿನ್ನೆಡೆಯಾಗಿದೆ.
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರ ಪರಾಭವವು ಮೈತ್ರಿಕೂಟದ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಬಿಜೆಪಿ ಜೊತೆಗಿನ ಭದ್ರ ಮೈತ್ರಿಯ ಹೊರತಾಗಿಯೂ, ತಮ್ಮದೇ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಉಭಯ ಪಕ್ಷಗಳ ವರಿಷ್ಠರು ವಿಫಲರಾಗಿದ್ದಾರೆ. ಶಾಸಕರ ಅಸಮಾಧಾನ ಹಾಗೂ ಪಕ್ಷದ ಆಂತರಿಕ ಭಿನ್ನಮತವು ಈ ಚುನಾವಣೆಯಲ್ಲಿ ಸ್ಫೋಟಗೊಂಡಿದ್ದು, ಮೈತ್ರಿಕೂಟದ ಒಗ್ಗಟ್ಟಿನ ಕೊರತೆಯನ್ನು ಎತ್ತಿತೋರಿಸಿದೆ. ಗೋವಿಂದರಾಜು ಅವರಿಗೆ ತಮ್ಮವರೇ ಕೈಕೊಟ್ಟ ಹಿನ್ನೆಲೆಯಲ್ಲಿ ಈ ಅನಿರೀಕ್ಷಿತ ಸೋಲು ಎದುರಾಗಿದೆ.
ಬಿಜೆಪಿಯ ರಘು ಕೌಟಿಲ್ಯ ಅವರಿಗೆ ನಿಗದಿಪಡಿಸಿದ್ದ ೩೦ ಮತಗಳಲ್ಲಿ ಒಂದು ಮತ ಅಸಿಂಧುವಾಗಿದ್ದು, ಅವರು ೨೯ ಮತಗಳನ್ನು ಪಡೆದುಕೊಂಡಿದ್ದಾರೆ.
ಬಿಜೆಪಿಯಲ್ಲಿನ ಅಸಮಾಧಾನ, ಜೆಡಿಎಸ್ ನ ಅಪಸ್ವರವನ್ನು ಡಿ.ಕೆ. ಶಿವಕುಮಾರ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ರಾಜಕೀಯವಾಗಿ ಇದು ಕಾಂಗ್ರೆಸ್ ನತ್ತ ದೃವೀಕರಣದ ಮುನ್ಸೂಚನೆಯಾಗಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕಾರ್ತಿಕ್ ಅವರು ಜಯ ಸಾಧಿಸಿದ್ದು, ಇದು ಪ್ರಮುಖ ಬೆಳವಣಿಗೆಯಾಗಿ ಪರಿಣಮಿಸಿದೆ. ವಿನಯ್ ಕಾರ್ತಿಕ್ ಅವರ ಗೆಲುವು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಕೊನೆಯ ಹಂತದ ಮತಗಳ ಲೆಕ್ಕಾಚಾರದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ವಿವಿಧ ಪಕ್ಷಗಳ ಶಾಸಕರ ಮೊದಲ ಹಾಗೂ ನಂತರದ ಆದ್ಯತೆಯ ಮತಗಳ ಲೆಕ್ಕಾಚಾರದ ಬಳಿಕ ಅವರು ಗೆಲುವಿನ ಗುರಿ ತಲುಪಿದರು.
ಗೆಲುವಿನ ಬಳಿಕ ಮಾತನಾಡಿದ ವಿನಯ್ ಕಾರ್ತಿಕ್, ತಮ್ಮ ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆದಿದ್ದೇನೆ. ೨೮ ಮತಗಳು ದೊರೆಯುವ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ನಿಂದಲೂ ತಮಗೆ ಬೆಂಬಲ ದೊರೆತಿದೆ. ತಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಧಾನಪರಿಷತ್ ಸದಸ್ಯರಾಗಿ ರಾಜ್ಯದ ಅಭಿವೃದ್ಧಿ, ಜನಪರ ಆಡಳಿತ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.
ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿನಯ್ ಕಾರ್ತಿಕ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿ, ಪರಸ್ಪರ ಸಿಹಿ ಹಂಚಿ ಶುಭಾಶಯ ಕೋರಿದರು. ರಾಜಕೀಯ ಮುಖಂಡರು ಕೂಡ ವಿನಯ್ ಕಾರ್ತಿಕ್ ಅವರಿಗೆ ಅಭಿನಂದನೆ ಸಲ್ಲಿಸಿ, ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಹಾರೈಸಿದರು.
ಈ ಚುನಾವಣಾ ಫಲಿತಾಂಶವು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ವಿಧಾನಪರಿಷತ್‌ನ ಕಾರ್ಯಚಟುವಟಿಕೆಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ತಮಗೆ ಮತಗಳು ಕಡಿಮೆಯಾಗಿರುವ ಬಗ್ಗೆ ಪಕ್ಷದ ವರಿಷ್ಠರು ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂತಿಮವಾಗಿ ನಾನು ಗೆಲುವು ಸಾಧಿಸಿದ್ದೇನೆ.
ಲಿಂಗರಾಜ್ ಪಾಟೀಲ್, ಬಿಜೆಪಿ ಅಭ್ಯರ್ಥಿ
ಕರ್ನಾಟಕ ವಿಧಾನ ಸಭೆಯಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ ಪಲಿತಾಂಶ (ಮೊದಲ ಪ್ರಾಶಸ್ತ್ಯ ಮತ)
ಕಾಂಗ್ರೆಸ್
೧. ಬಿ.ಕೆ. ಹರಿಪ್ರಸಾದ್ ೩೦
೨. ಪಿ.ವಿ. ಮೋಹನ್ – ೨೯
೩. ಬಿ.ಎಸ್. ಶಿವಣ್ಣ- ೩೦
೪. ತಿಪ್ಪಣಪ್ಪ ಕಮಕನೂರ- ೩೦
೫. ವಿನಯ್ ಕಾರ್ತಿಕ್- ೩೨
ಬಿಜೆಪಿ
೧. ರಘು ಕೌಟಿಲ್ಯ- ೨೯
೨. ಲಿಂಗರಾಜ ಪಾಟೀಲ್ ೨೭
ಜೆಡಿಎಸ್
೧. ಗೋವಿಂದರಾಜು-೧೪
ಜೆಡಿಎಸ್, ಬಿಜೆಪಿ ಎರಡೂ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಪಾರ್ಟಿ ವಿಥ್ ಡಿಪ್ರೆನ್ಸ್ ಎಂದು ಕರೆಸಿಕೊಳ್ಳುವ ಬಿಜೆಪಿಯಿಂದಲೂ ಕ್ರಾಸ್ ವೋಟಿಂಗ್ ಆಗಿದೆ. ನಮ್ಮ ಪಕ್ಷದ ಸಾಧನೆ ನೋಡಿ ನಮಗೆ ಮತಹಾಕಿದ್ದಾರೆ.
ಬಿ.ಕೆ. ಹರಿಪ್ರಸಾದ್
ಅಧ್ಯಕರು, ಕೆಪಿಸಿಸಿ


























