Home ಜಿಲ್ಲೆ ಐದು ದಿನಗಳಲ್ಲಿ ರಸ್ತೆ ದುರಸ್ತಿ ಮಾಡದಿದ್ದರೆ ರಸ್ತೆ ತಡೆ ಎಚ್ಚರಿಕೆ

ಐದು ದಿನಗಳಲ್ಲಿ ರಸ್ತೆ ದುರಸ್ತಿ ಮಾಡದಿದ್ದರೆ ರಸ್ತೆ ತಡೆ ಎಚ್ಚರಿಕೆ

ಸೈದಾಪುರ: ಜು.೧೦:ಕಣೇಕಲ್ ಗ್ರಾಮದಿಂದ ಮಾಧ್ವಾರ ಹಾಗೂ ಗುಡ್ಲಗುಂಟ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆ ಸಂಪೂರ್ಣ ಹದಗೆಟ್ಟು, ರಸ್ತೆ ಬದಿಯಲ್ಲಿ ಜಾಲಿಕಂಟಿಗಳು ಬೆಳೆದಿರುವುದರಿಂದ ರೈತರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಹಾಗೂ ಜಾಲಿಕಂಟಿಗಳ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಮತ್ತು ರೈತರು ಕೈಯಲ್ಲಿ ಬೆತ್ತ ಹಿಡಿದು, ಡೊಳ್ಳು-ತಮಟೆ ಬಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್, ರಸ್ತೆ ಸಂಪೂರ್ಣ ತೆಗ್ಗು-ದಿನ್ನೆಗಳಿಂದ ಕೂಡಿದ್ದು, ಎರಡೂ ಬದಿಗಳಲ್ಲಿ ಜಾಲಿಕಂಟಿಗಳು ಬೆಳೆದಿರುವ ಕಾರಣ ರೈತರು ತಮ್ಮ ಜಮೀನುಗಳಿಗೆ ತೆರಳಲು ಪರದಾಡುವಂತಾಗಿದೆ. ಇನ್ನೂ ಐದು ದಿನಗಳೊಳಗೆ ರಸ್ತೆ ದುರಸ್ತಿ, ತಗ್ಗು-ಗುಂಡಿಗಳ ಮುಚ್ಚುವಿಕೆ ಹಾಗೂ ಜಾಲಿಕಂಟಿಗಳ ತೆರವು ಕಾರ್ಯ ಆರಂಭಿಸದಿದ್ದರೆ ಯಾದಗಿರಿ-ರಾಯಚೂರು ಮುಖ್ಯರಸ್ತೆಯ ಕಿಲ್ಲನಕೇರಾ ಸರ್ಕಲ್‌ನಲ್ಲಿ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಉಮೇಶ್ ಕೆ. ಮುದ್ನಾಳ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಲ್ಲೇಶಿ, ಬಸಯ್ಯಸ್ವಾಮಿ, ಮಲ್ಲರೆಡ್ಡಿ ಉಪ್ಪಾರ್, ರಮೇಶ್ ಹಿಂದುಪುರ್, ಶಿವರಾಯ ಉಪ್ಪಾರ್, ಸೀನಪ್ಪ ಉಪ್ಪಾರ್, ದೇಸಾಯಿ ಬಾಡದ, ಸಾಬಣ್ಣ ಬಾಡದ, ಸುಭಾಷ್ ವಿಶ್ವಕರ್ಮ, ಅಂಜಪ್ಪ ಹಿಂದುಪುರ್, ಮಲ್ಲಪ್ಪ ಸೆಂಟ್ರಿಗ್, ಮಂಜುನಾಥ್ ಉಪ್ಪಾರ್, ಸಿದ್ದಪ್ಪ, ಚಂದಲಾಲ್ ಮೈಥಾನ್, ಸೋಮರೆಡ್ಡಿ ಬಾಡದ, ಗೋಕುಲ್ ಸಾಬ್, ನಿಂಗಪ್ಪ ಬಾಡದ, ಯಂಕಪ್ಪ ಪೂಜಾರಿ, ಬಸ್ಸಪ್ಪ ಪೂಜಾರಿ, ತಾಯಪ್ಪ ಸೌರಪ್ನೂರ್, ಬಸಯ್ಯಸ್ವಾಮಿ ಹಿರೇಮಠ, ಕಾಶಪ್ಪ ಕುಂಬಾರ್, ಸುರೇಶ್ ಬಡಿಗೇರ್, ಬಸಪ್ಪ ಉಪ್ಪಾರ್, ಗುಂಡಯ್ಯ ಕುಂಬಾರ್, ಅಂಜಪ್ಪ ಉಪ್ಪಾರ್, ಮಹೇಶ್ ಮೀಟಿ, ಅಂಜಪ್ಪ ಕಪಲಿ, ಮಲ್ಲಪ್ಪ ಕದರಪುರ್, ತಾಯಪ್ಪ ಕದರಪುರ್ ಸೇರಿದಂತೆ ಮಹಿಳೆಯರು, ಯುವಕರು, ರೈತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.