Home ಜಿಲ್ಲೆ ಬಾಲಮಂದಿರಗಳಿಗೆ ಭೇಟಿ: ನೀಡಿ ಪರಿಶೀಲನೆ

ಬಾಲಮಂದಿರಗಳಿಗೆ ಭೇಟಿ: ನೀಡಿ ಪರಿಶೀಲನೆ

ಧಾರವಾಡ,ಆ೮: ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಅವರು ಮಹಿಳೆಯರ ಅನುಪಾಲನಾ ಗೃಹ, ಬಾಲಕರ ಸರಕಾರಿ ಬಾಲಮಂದಿರ ಹಾಗೂ ಉಣಕಲ್ ಮನೋವಿಕಲ ಸರ್ಕಾರಿ ಬಾಲಮಂದಿರ ಹುಬ್ಬಳ್ಳಿಗೆ ಭೇಟಿ ನೀಡಿ ಸಂಸ್ಥೆಯ ಮಕ್ಕಳು, ಸಂಸ್ಥೆಯ ಅಧೀಕ್ಷಕರುಗಳು ಹಾಗೂ ಪರಿವೀಕ್ಷಣಾಧಿಕಾರಿಗಳನ್ನು ಭೇಟಿ ನೀಡಿ ಸಂಸ್ಥೆಯ ಎಲ್ಲ ವ್ಯವಸ್ಥೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.


ಬಾಲಕರ ಬಾಲಮಂದಿರದ ಮಕ್ಕಳ ಸಂಸ್ಥೆಯಲ್ಲಿ ಮಕ್ಕಳ ಹಾಜರಾತಿಯನ್ನು ಪರಿಶೀಲಿಸಿದರು. ಎಲ್ಲ ಅಧಿಕಾರಿಗಳೊಂದಿಗೆ ಸಂಸ್ಥೆಯ ಕಟ್ಟಡವನ್ನು, ಮಕ್ಕಳ ಊಟದ ಕೊಠಡಿ ಸ್ವಚ್ಛತೆಯನ್ನು ಪರಿಶೀಲಿಸಿದರು. ಮಕ್ಕಳಿಗೆ ನೀಡುವ ಪ್ರತಿದಿನದ ಆಹಾರದ ಬಗ್ಗೆ ವಿಚಾರಿಸಿದರು, ಮಕ್ಕಳ ಪ್ರತಿದಿನದ ಚಟುವಟಿಕೆಯ ಕುರಿತು ಮಕ್ಕಳೊಂದಿಗೆ ಮಾತನಾಡಿದರು.


ಬಾಲಕರ ಬಾಲಮಂದಿರ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಜಿಟಿಟಿಸಿ ತರಬೇತಿಯಲ್ಲಿ ಭಾಗವಹಿಸುವಂತೆ ತಿಳಿಸಿದರು. ಮಕ್ಕಳ ಚಟುವಟಿಕೆಗಳ ಕೈಪಿಡಿಯನ್ನು ವೀಕ್ಷಿಸಿ, ೨೦೨೫-೨೬ ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದ ವಿವರ ನೋಡಿ ಹರ್ಷ ವ್ಯಕ್ತಪಡಿಸಿದರು. ಮಕ್ಕಳ ಉಜ್ವಲ್ ಜೀವನ ರೂಪಿಸಲು ಈಗಿನಿಂದಲೇ ಎಲ್ಲ ಸಿಬ್ಬಂದಿಯವರು ಶ್ರಮಿಸಬೇಕೆಂದು ಸೂಚನೆ ನೀಡಿದರು.


ಮನೋವಿಕಲ ಬಾಲಕಿಯರ ಬಾಲಮಂದಿರ ಸಂಸ್ಥೆಯನ್ನು ಭೇಟಿ ನೀಡಿ, ಮಕ್ಕಳು ಮಾಡಿದ ಹೂಗುಚ್ಚವನ್ನು ಸ್ವೀಕರಿಸಿದರು. ಸಂಸ್ಥೆಯ ಸ್ವಚ್ಚತೆ, ಮಕ್ಕಳಿಗೆ ನೀಡುತ್ತಿರುವ ಆಹಾರದ ಪದಾರ್ಥಗಳ ಪಟ್ಟಿ ಹಾಗೂ ಮಕ್ಕಳ ಚಟುವಟಿಕೆಯನ್ನು ಪರಿಶೀಲಿಸಿದರು. ಮಕ್ಕಳು ಪ್ರದರ್ಶಿಸಿದ ನೃತ್ಯವನ್ನು ವೀಕ್ಷಿಸಿ, ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಾರೈಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಬ. ಜಾವೂರ ಅವರು ಉಪಸ್ಥಿತರಿದ್ದರು.