
ಯಾದಗಿರಿ: ಆಧುನಿಕ ಜೀವನಶೈಲಿಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದರೂ ಒತ್ತಡದ ಬದುಕು ಹೆಚ್ಚಾಗಿದೆ. ಹೀಗಾಗಿ ಜೀವನದ ಕೆಲ ಸಮಯವನ್ನು ಅಧ್ಯಾತ್ಮಿಕ ಚಿಂತನೆಗೆ ಮೀಸಲಿಡಬೇಕು. ಧಾರ್ಮಿಕ ಕ್ಷೇತ್ರಗಳ ಭೇಟಿ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವುದರ ಜೊತೆಗೆ ಸಕಾರಾತ್ಮಕ ಚಿಂತನೆ ಹಾಗೂ ಬದುಕಿನಲ್ಲಿ ಬದಲಾವಣೆಗೆ ಪ್ರೇರಣೆ ನೀಡುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ವಡಗೇರಾ ತಾಲೂಕಿನ ಅಬ್ಬೆತುಮಕೂರಿನ ಪ್ರಸಿದ್ಧ ಶ್ರೀ ವಿಶ್ವಾರಾಧ್ಯರ ಅನುಗ್ರಹ ಕ್ಷೇತ್ರಕ್ಕೆ ಭೇಟಿ ನೀಡಿ ವಿಶ್ವಾರಾಧ್ಯರ ದರ್ಶನ ಪಡೆದ ಸಚಿವರು, ಶ್ರೀಮಠದ ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ೫೮ನೇ ಜನ್ಮದಿನದ ಅಂಗವಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.
ಭಾರತದ ನೆಲದಲ್ಲಿ ಅನಾದಿ ಕಾಲದಿಂದ ಋಷಿ-ಮುನಿಗಳು, ಸಾಧು-ಸಂತರು, ಶರಣರು ಹಾಗೂ ಸೂಫಿ ಸಂತರು ಅಧ್ಯಾತ್ಮಿಕ ಸಾಧನೆಯ ಮೂಲಕ ಸಮಾಜಕ್ಕೆ ಮಾನವೀಯ ಸಂದೇಶ ನೀಡಿದ್ದಾರೆ. ಸಮಾನತೆ, ಸಾಮರಸ್ಯ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯರ ಸಾಲಿನಲ್ಲಿ ವಿಶ್ವಾರಾಧ್ಯರು ಪ್ರಮುಖರು. ತಮ್ಮ ಬದುಕನ್ನು ಲೋಕಕಲ್ಯಾಣಕ್ಕೆ ಅರ್ಪಿಸಿದ ಅವರು ಇಂದಿಗೂ ಸಾವಿರಾರು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಅಬ್ಬೆತುಮಕೂರು ಶ್ರೀಮಠವು ಭಾವೈಕ್ಯತೆಯ ಪ್ರತೀಕವಾಗಿದ್ದು, ತ್ರಿವಿಧ ದಾಸೋಹದ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ಶ್ರೀಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಸಚಿವರು ಶ್ರೀಮಠದ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು ನೈತಿಕ ಮೌಲ್ಯಗಳು ಹಾಗೂ ಜನಪರ ಕಾಳಜಿಯೊಂದಿಗೆ ಸಾರ್ವಜನಿಕ ಸೇವೆ ಮಾಡಿದಾಗ ಮಾತ್ರ ರಾಜಕೀಯ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ಅಭಿವೃದ್ಧಿಯ ಚಿಂತನೆಯೊAದಿಗೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ಈ ದೃಷ್ಟಿಯಿಂದ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಸಾರ್ವಜನಿಕ ಬದುಕು ಅರ್ಥಪೂರ್ಣವಾಗಿದೆ ಎಂದರು.
ಶುದ್ಧ ಹಸ್ತ ಹಾಗೂ ಪರಿಶುದ್ಧ ಧ್ಯೇಯದೊಂದಿಗೆ ಜನಸೇವೆ ಮಾಡುತ್ತಿರುವ ಡಾ. ಶರಣಪ್ರಕಾಶ ಪಾಟೀಲ್ ಅವರು ಸರಳ, ಸಜ್ಜನ ಹಾಗೂ ಧಾರ್ಮಿಕ ಚಿಂತನೆಗಳನ್ನು ಹೊಂದಿರುವ ಅಪರೂಪದ ರಾಜಕಾರಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಠದಲ್ಲಿ ಕೆಲಕಾಲ ಕಳೆದ ಸಚಿವರು ಶ್ರೀಗಳೊಂದಿಗೆ ಮಠದ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಿದರು. ಬಳಿಕ ಶ್ರೀಮಠದ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಿರಿಯ ಶ್ರೀ ಶ್ರೀ ಶಿವಶೇಖರ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪೂರ, ಮುಖಂಡರಾದ ಸಿದ್ದಲಿಂಗರಡ್ಡಿ ಉಳ್ಳೇಸುಗೂರ, ಚಿದಾನಂದಪ್ಪ ಕಾಳೆಬೆಳಗುಂದಿ, ಬಸ್ಸುಗೌಡ ಬಿಳ್ಹಾರ, ಶಾಮಸನ್ ಮಾಳಿಕೇರಿ, ಸಂಗನಗೌಡ ಮೂಡಬೂಳ, ತಿಮ್ಮಣ್ಣ ನಾಯಕ, ಶಿವು ಬೆಳಗುಂದಿ, ಶರಣಗೌಡ ನಾಚವಾರ, ಸಿದ್ದಪ್ರಕಾಶರೆಡ್ಡಿ ನಾಲವಾರ, ಮೋಹನರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





























