Home ಜಿಲ್ಲೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ

ಧಾರವಾಡ,ಆ೬: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಜಗನ್ನಾಥ ಹಲಮಡಗಿ ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯಲ್ಲಿ ಸಭೆ ನಡೆಸಿ, ಮಕ್ಕಳ ಹಕ್ಕುಗಳ ಕುರಿತು ಚರ್ಚಿಸಿದರು.


ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಕುರಿತು ವಿಚಾರಿಸಿ, ಹಾಗೂ ಶಾಲೆಯಲ್ಲಿ ಮಕ್ಕಳ ಕ್ಲಬ್‌ಗಳನ್ನು ಮಾಡಿ ಅನುಷ್ಠಾನಕ್ಕೆ ತರಲು ತಿಳಿಸಿದರು. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾದೆ ಇರಲು ಧಾರವಾಡ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ಇವರ ಸಹಯೋಗದೊಂದಿಗೆ ಎಲ್ಲ ಶಾಲೆಗಳಲ್ಲಿ ಟೆಲಿ ಮಾನಸ ಕುರಿತು ವ್ಯಾಪಕ ಪ್ರಚಾರ ಮಾಡಲು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸಲು ತಿಳಿಸಿದರು.


ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮಕ್ಕಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒಗದಿಸುವಂತೆ ತಿಳಿಸಿದರು. ಜಿಲ್ಲಾ ಆಸ್ಪತ್ರೆ ಹಾಗೂ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿ ಇಲ್ಲಿ ಶಿಶು ಮಂದಿರ ಪ್ರಾರಂಭಿಸುವAತೆ ನಿರ್ದೇಶನ ನೀಡಿದರು.


ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕಾಣೆಯಾದ ಮಕ್ಕಳ ಕುರಿತು ಹಾಗೂ ಪೋಕ್ಸೋ ಬಾಲ್ಯವಿವಾಹ ಪ್ರಕರಣಗಳ ಕುರಿತು ಚರ್ಚಿಸಿ ಧಾರವಾಡ ಜಿಲ್ಲೆಗೆ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕೆಂದು ಮಕ್ಕಳು ಕಲಿಯಲು ಬರುತ್ತಾರೆ. ಆ ಮಕ್ಕಳು ದಾರಿ ತಪ್ಪಿ ಬೇರೆ ತಪ್ಪು ದಾರಿ ತುಳಿಯದಂತೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಮಾಡಲು ನಿರ್ದೇಶನ ನೀಡಿದರು.


ಆಯುಷ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲೆಯಲ್ಲಿರುವ ಶಾಲೆ ಹಾಗೂ ವಸತಿ ನಿಲಯಗಳ ಮಾಹಿತಿ ಪಡೆದು ಔಷದಿ ಸಸ್ಯಗಳನ್ನು ನೆಡಲು ಹಾಗೂ ಈ ಕಾರ್ಯಕ್ಕೆ ಅಧಿಕಾರಿಗಳು ಸಹಕರಿಸಿ ಶಾಲೆ ಹಾಗೂ ವಸತಿ ನಿಲಯಗಳ ಪಟ್ಟಿ ನೀಡಲು ತಿಳಿಸಿ, ಸಸಿ ನೆಟ್ಟ ಶಾಲೆಗಳಿಗೆ ಯೋಗಾ ಶಿಕ್ಷಕರನ್ನು ನೇಮಿಸಿ ಶಾಲೆಯ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಲು ತಿಳಿಸಿದರು.


ಜಿಲ್ಲಾ ಕಾರ್ಮಿಕ ಯೋಜನಾಧಿಕಾರಿಗಳಿಗೆ ಭಿಕ್ಷಾಟಣೆ ಹಾಗೂ ವಿವಿಧ ಉದ್ಪಾದನಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಕೆಲಸ ನೀಡಿದ ಮಾಲೀಕ ಹಾಗೂ ಕೆಲಸಕ್ಕೆ ಕಳುಹಿಸಿದ ಪಾಲಕರ ಮೇಲೂ ಕ್ರಮ ತೆಗೆದುಕೊಳ್ಳಲು ತಿಳಿಸಿದರು.


ಮಗುವಿನೊಂದಿಗೆ ಭಿಕ್ಷೆ ಬೇಡುವ ತಾಯಿಯನ್ನು ರಕ್ಷಣೆ ಮಾಡಿ, ನಿರಾಶ್ರೀತರ ವಸತಿ ಕೇಂದ್ರದಲ್ಲಿ ಇಟ್ಟುಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುತ್ತಾ, ಧಾರವಾಡ ಜಿಲ್ಲೆಯನ್ನು ಭಿಕ್ಷಾಟಣೆ ಮುಕ್ತ ಜಿಲ್ಲೆಯನ್ನಾಗಿ ಮಾಡೋಣ ಎಂದು ಹೇಳಿದರು.


ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಧಾರವಾಡ ಜಿಲ್ಲೆಯ ಮಕ್ಕಳು ಚಟುವಟಿಕೆಯಿಂದ ಇರುವಂತೆ ಹಾಗೂ ಹೆಚ್ಚು ನಮ್ಮ ವಿಭಾಗದ ಮಕ್ಕಳು ಕ್ರೀಡೆಯಲ್ಲಿ ಪ್ರಶಸ್ತಿ ಪಡೆಯಬೇಕು ಎಂದು ತಿಳಿಸಿದರು.
ಸಖಿ ಕೇಂದ್ರದಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಪರಿಶೀಲಿಸಿದರು. ಹಾಗೂ ಮಕ್ಕಳ ಸಹಾಯವಾಣಿ ೧೦೯೮ ಗೆ ಬರುವ ಕರೆಗಳ ಮಾಹಿತಿ ಪಡೆದುಕೊಂಡರು.


ಸಭೆಯಲ್ಲಿ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಜರಿದ್ದರು.