Home ಜಿಲ್ಲೆ ವಿಶ್ವಾರಾಧ್ಯರು ಜಗದ ಜನರನ್ನು ಉದ್ಧರಿಸಿದ ಜಗಜಟ್ಟಿ: ಡಾ. ಗಂಗಾಧರ ಶ್ರೀ

ವಿಶ್ವಾರಾಧ್ಯರು ಜಗದ ಜನರನ್ನು ಉದ್ಧರಿಸಿದ ಜಗಜಟ್ಟಿ: ಡಾ. ಗಂಗಾಧರ ಶ್ರೀ

ಯಾದಗಿರಿ: ಅಣಿಮಾದಿ ಅಷ್ಟಸಿದ್ಧಿಗಳನ್ನು ಸಂಪಾದಿಸಿ, ಲೋಕಸಂಚಾರ ಮಾಡುತ್ತಾ ಜನರ ಅಜ್ಞಾನ, ಕಷ್ಟ-ಕಾರ್ಪಣ್ಯಗಳನ್ನು ದೂರಮಾಡಿದ ವಿಶ್ವಾರಾಧ್ಯರು ನಿಜಾರ್ಥದಲ್ಲಿ ಜಗದ ಜಗಜಟ್ಟಿಯಾಗಿದ್ದರು ಎಂದು ಅಬ್ಬೆ ತುಮಕೂರು ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಹೇಳಿದರು.

ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರ ಪುಣ್ಯಕ್ಷೇತ್ರದಲ್ಲಿ ಬುಧವಾರ ರಾತ್ರಿ ನಡೆದ ಪರಂಪರಾ ಪಾದಯಾತ್ರೆಯ ಸಮಾರೋಪ ಹಾಗೂ ಅಮಾವಾಸ್ಯೆ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗಂವ್ಹಾರದ ತೋಪಕಟ್ಟಿ ಹಿರೇಮಠದಲ್ಲಿ ಜನಿಸಿದ ವಿಶ್ವಾರಾಧ್ಯರು ಕಾಶಿಯಲ್ಲಿ ವಿದ್ಯಾಭ್ಯಾಸ ಪಡೆದು ಘನಪಂಡಿತರಾಗಿ, ತಾವು ಗಳಿಸಿದ ಜ್ಞಾನವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಜನಸಾಮಾನ್ಯರಿಗೆ ಹಂಚಲು ಲೋಕಸಂಚಾರ ಕೈಗೊಂಡರು. ಜನರ ಕಾಳಜಿ, ಅಜ್ಞಾನ ಹಾಗೂ ಸಂಕಷ್ಟಗಳನ್ನು ನಿವಾರಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟ ಪುಣ್ಯಾತ್ಮರಾಗಿದ್ದರು ಎಂದು ಬಣ್ಣಿಸಿದರು.

ಮಾನವ ಜನ್ಮ ಅತ್ಯಮೂಲ್ಯವಾಗಿದ್ದು, ಅದನ್ನು ವ್ಯರ್ಥಗೊಳಿಸದೆ ಸಾರ್ಥಕವಾಗಿ ಬದುಕಬೇಕು ಎಂಬ ಸಂದೇಶವನ್ನು ವಿಶ್ವಾರಾಧ್ಯರು ನೀಡಿದ್ದರು. ಜಾತಿ, ಮತ, ಪಂಥ ಹಾಗೂ ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆಯ ನೆಲೆಯಲ್ಲಿ ಸೌಹಾರ್ದದಿಂದ ಬದುಕುವುದು ಅವರ ಆಶಯವಾಗಿತ್ತು. ಇದೇ ಪರಂಪರೆಯನ್ನು ಅಬ್ಬೆ ತುಮಕೂರು ಮಠ ಇಂದಿಗೂ ಮುಂದುವರಿಸಿಕೊAಡು, ಸಕಲ ಜೀವಾತ್ಮರ ಒಳಿತನ್ನೇ ಬಯಸುತ್ತಿದೆ ಎಂದು ತಿಳಿಸಿದರು.

ಜಗತ್ತಿನ ಹಾಗೂ ಜನತೆಯ ಕಲ್ಯಾಣಕ್ಕಾಗಿ ಪ್ರತಿವರ್ಷ ಪರಂಪರಾ ಪಾದಯಾತ್ರೆ ನಡೆಸಲಾಗುತ್ತಿದೆ. ಈ ಬಾರಿ ಪಾದಯಾತ್ರೆಯ ಸಂದರ್ಭದಲ್ಲಿ ಮಳೆ ಸುರಿದಿರುವುದು ಸಮೃದ್ಧಿಯ ಶುಭಸೂಚನೆಯಾಗಿದೆ ಎಂದು ಅವರು ಹೇಳಿದರು.

ಮೂರು ದಿನಗಳ ಪಾದಯಾತ್ರೆಯಲ್ಲಿ ಮಕ್ಕಳಿಂದ ವಯೋವೃದ್ಧರವರೆಗೆ ಸಾವಿರಾರು ಭಕ್ತರು ಭಕ್ತಿ-ಭಾವದಿಂದ ಪಾಲ್ಗೊಂಡಿದ್ದಾರೆ. ವಿಶ್ವಾರಾಧ್ಯರ ಕೃಪೆ ಹಾಗೂ ಸದ್ಗುರುವಿನ ಆಶೀರ್ವಾದದಿಂದ ಎಲ್ಲರ ಬದುಕಿನಲ್ಲಿ ಸನ್ಮಂಗಳ ನೆಲೆಸಲಿ ಎಂದು ಹಾರೈಸಿದರು.

ಪಾದಯಾತ್ರೆಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ದಾಸೋಹ ಸೇವೆ ಸಲ್ಲಿಸಿದ ಭಕ್ತರನ್ನು ಹಾಗೂ ಯಾತ್ರೆ ಸುಗಮವಾಗಿ ಸಾಗಲು ಸಹಕರಿಸಿದ ಪೊಲೀಸ್, ಆರೋಗ್ಯ, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಯ ಸೇವೆಯನ್ನು ಶ್ರೀಗಳು ಶ್ಲಾಘಿಸಿದರು.

ಭಕ್ತಿಭಾವದಲ್ಲಿ ಮಿಂದೆದ್ದ ಪಾದಯಾತ್ರೆ

ಸಂಜೆ ಅಬ್ಬೆ ತುಮಕೂರಿನ ಪಾದಗಟ್ಟೆ ತಲುಪಿದ ಪರಂಪರಾ ಪಾದಯಾತ್ರೆಯನ್ನು ಸಹಸ್ರಾರು ಭಕ್ತರು ಸಡಗರ ಹಾಗೂ ಭಕ್ತಿಭಾವದಿಂದ ಬರಮಾಡಿಕೊಂಡರು. ಡೊಳ್ಳು, ಬಾಜಾ-ಭಜಂತ್ರಿ ಸೇರಿದಂತೆ ವಿವಿಧ ಮಂಗಳವಾದ್ಯಗಳ ನಾದ, ಸುಮಂಗಲಿಯರ ಕಳಸ, ಕೋಲಾಟ, ನೂರಾರು ಭಜನಾ ಮೇಳಗಳು, ಪೌರಾಣಿಕ ವೇಷಧಾರಿಗಳ ಪ್ರದರ್ಶನ ಹಾಗೂ ರಂಗುರAಗಿನ ವಿದ್ಯುತ್ ದೀಪಗಳು ಪಾದಗಟ್ಟೆ ಆವರಣಕ್ಕೆ ವಿಶೇಷ ಮೆರುಗು ನೀಡಿದವು.

ಪಾದಯಾತ್ರೆ ಸಾಂಗೋಪಾAಗವಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಾದಗಟ್ಟೆಯಲ್ಲಿ ನಿಂತು ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ಭಕ್ತರತ್ತ ಕೈಬೀಸಿದಾಗ, ನೆರೆದಿದ್ದ ಸಾವಿರಾರು ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ಕೇರಳ, ರಾಜಮಂಡ್ರಿ, ಹೈದರಾಬಾದ್ ಹಾಗೂ ಬೆಂಗಳೂರು ನಗರಗಳಿಂದ ಆಗಮಿಸಿದ್ದ ೧೫೦ಕ್ಕೂ ಹೆಚ್ಚು ಕಲಾವಿದರು ಪ್ರದರ್ಶಿಸಿದ ಪೌರಾಣಿಕ ವೇಷಭೂಷಣಗಳು ಹಾಗೂ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದ್ದು, ಭಕ್ತರ ಮನಸೂರೆಗೊಂಡವು.

ಶಿವಾನುಭವ ಗೋಷ್ಠಿಯ ಬಳಿಕ ಭಕ್ತರು ಪ್ರಸಾದ ಸ್ವೀಕರಿಸಿ ವಿಶ್ರಾಂತಿ ಪಡೆದರು. ಮರುದಿನ ಬೆಳಿಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ತಮ್ಮ ತಮ್ಮ ಊರುಗಳಿಗೆ ತೆರಳಿದರು.

ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ನರಸಣಗೌಡ ರಾಯಚೂರು, ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೋಸಂಬಿ, ಡಾ. ವೀರೇಶ ಜಾಕಾ, ಬಸ್ಸುಗೌಡ ಬಿಳ್ಹಾರ, ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡು, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲಣ್ಣಗೌಡ ಕೌಳೂರು, ವಿಶ್ವನಾಥ ಸಿರವಾಳ, ಮಾಜಿ ಶಾಸಕ ದೊಡ್ಡಪ್ಪಗೌಡ ನರಬೋಳ ಸೇರಿದಂತೆ ನಾಡಿನ ಹರ-ಗುರು ಚರಮೂರ್ತಿಗಳು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.