
ಕಮಲನಗರ,ಅ ೨೫: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಜಿಲ್ಲಾ ಪಂಚಾಯತ್ ಎಸ್ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಮಾಜ ಸೇವಕ ಹಾಗೂ ‘ಬಡವರ ಬಂಧು’ ಎಂದೇ ಹೆಸರುವಾಸಿಯಾದ ವಿಷ್ಣುದಾಸ ಪಾಂಡುರAಗ ಶಿಂಧೆ ಅವರು ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ನೂರಾರು ಕಾರ್ಯಕರ್ತರೊಂದಿಗೆ ಭಾಲ್ಕಿಗೆ ತೆರಳಿ, ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಭಾರಿ ಶಕ್ತಿ ಪ್ರದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣುದಾಸ ಶಿಂಧೆ, “ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತನಾಗಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ರಾತ್ರಿ-ಹಗಲು ಶ್ರಮಿಸಿದ್ದೇನೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ. ಹೀಗಾಗಿ ಸ್ಥಳೀಯ ಜನರು ಹಾಗೂ ಪಕ್ಷದ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ,” ಎಂದು ತಿಳಿಸಿದರು.
“ಪಕ್ಷದ ಹೈಕಮಾಂಡ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ, ಔರಾದ್ ತಾಲೂಕು ಕಾಂಗ್ರೆಸ್ ಮುಖಂಡ ಭೀಮಸೇನರಾವ್ ಶಿಂದೆ ಸೇರಿದಂತೆ ಹಿರಿಯ ನಾಯಕರು ನನ್ನ ಸೇವೆ ಮತ್ತು ಜನಬೆಂಬಲವನ್ನು ಪರಿಗಣಿಸಿ ಟಿಕೆಟ್ ನೀಡಿದ್ದೇ ಆದಲ್ಲಿ, ಕಮಲನಗರ ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ಶತಪ್ರತಿಶತ ಖಚಿತ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಗ್ರಾಮಗಳ ಕಾರ್ಯಕರ್ತರ ಬೃಹತ್ ಬೆಂಬಲ: ಈ ಶಕ್ತಿ ಪ್ರದರ್ಶನದ ವೇಳೆ ಕಮಲನಗರ ಪಟ್ಟಣ ಸೇರಿದಂತೆ ಡಿಗ್ಗಿ, ಹೊಳಸಮುದ್ರ, ಮದನೂರು, ಬಾಲೂರು, ರಾಮಪೂರು, ಖತಗಾಂವ್, ಖೇಡ್, ಸಂಗಮ, ಹುಲಸೂರು, ಸೋನಾಳ, ಚ್ಯಾಂಡೇಶ್ವರ, ಕೊಟಗ್ಯಾಲ ಹಾಗೂ ಡೋಣಗಾಂವ್ ಸೇರಿದಂತೆ ಹಲವು ಗ್ರಾಮಗಳ ಸರ್ವ ಸಮುದಾಯದ ನೂರಾರು ಮುಖಂಡರು ಮತ್ತು ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು.























