
ಚಿಕ್ಕಬಳ್ಳಾಪುರ.ಆ.೧೯-ಕಾಲೇಜು ವಿದ್ಯಾರ್ಥಿಗಳು ಬೇಕಾದ ಪದವಿಯನ್ನು ಪಡೆಯಿರಿ.ಅದೇ ಪದವಿಯೊಳಗೆ ಸಿಲುಕಿಕೊಳ್ಳಬೇಡಿ.ನಿಮ್ಮ ಒಳತಿಗಾಗಿ ತಂತ್ರಜ್ಞಾನವನ್ನು ಬಳಸಿ ಆದರೆ ಎಂದಿಗೂ ವಿವೇಕವನ್ನು ಕಳೆದುಕೊಳ್ಳಬೇಡಿ. ದೊಡ್ಡ ಕನಸು ಕಾಣಿರಿ,ಅಪ್ಪಿತಪ್ಪಿಯೂ ಮನುಷ್ಯರನ್ನು ಸಣ್ಣವರಾಗಿ ಕಾಣಬೇಡಿ.ಸಾಧನೆಯ ಮೂಲಕ ಉನ್ನತ ಸ್ಥಾನಕ್ಕೇರಿರಿ ಆದರೆ ನಿಮ್ಮ ಬೇರುಗಳನ್ನು ಮರೆಯದೆ ಕಾಪಿಟ್ಟುಕೊಳ್ಳಿ ಎಂದು ಉಪನ್ಯಾಸಕ ಮುನಿರಾಜು ಎಂ.ಅರಿಕೆರೆ ತಿಳಿಸಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅನನ್ಯ ಕಲಾ ರಂಗ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಅನನ್ಯ ಗಾನ ಕಲರವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಯುವಕರ ಮುಂದೆ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿರುವಂತೆ ಸ್ಪರ್ಧೆ ಹೆಚ್ಚಾಗಿದೆ. ಹೊಸ ತಂತ್ರಜ್ಞಾನಗಳು ಬರುತ್ತಿರುವಂತೆ ಕೆಲಸಗಳ ಸ್ವರೂಪವೂ ಬದಲಾಗುತ್ತಿದೆ. ಆದ್ದರಿಂದ ಕೇವಲ ಪದವಿ ಸಾಕಾಗುವುದಿಲ್ಲ.ಅದಕ್ಕೆ ತಕ್ಕ ಕೌಶಲ್ಯ ಬೇಕು.ಕಲಿಯುವ ಮನಸ್ಸು ಬೇಕು.ಹೊಸದನ್ನು ಸ್ವೀಕರಿಸುವ ಸಾಮರ್ಥ್ಯ ಬೇಕು.ಕೌಶಲ್ಯಕ್ಕಿಂತಲೂ ಮುಖ್ಯವಾದುದು ನಿಷ್ಠೆಯಾಗಿದೆ ಎಂದರು.
ನೀವು ವೈದ್ಯರಾಗಬಹುದು, ವಕೀಲರಾಗಬಹುದು,ಶಿಕ್ಷಕರಾಗಬಹುದು, ಪತ್ರಕರ್ತರಾಗಬಹುದು, ವಿಜ್ಞಾನಿಯಾಗಬಹುದು, ಉದ್ಯಮಿಯಾಗಬಹುದು, ರೈತನ ಮಗನಾಗಬಹುದು, ಸರ್ಕಾರಿ ನೌಕರರಾಗಬಹುದು. ಯಾವ ವೃತ್ತಿಯಾದರೂ ಪರವಾಗಿಲ್ಲ.ಕೆಲಸದಲ್ಲಿ ದೊಡ್ಡದು ಚಿಕ್ಕದು ಇರಲ್ಲ; ಕೆಲಸ ಮಾಡುವ ಮನಸ್ಸು ದೊಡ್ಡದಿರಬೇಕು ಅಷ್ಟೇ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ,ಜ್ಞಾನ ವಿಜ್ಞಾನ ತಂತ್ರಜ್ಞಾನದಲ್ಲಿ ನಾವೆಷ್ಟೇ ಬೆಳೆದಿದ್ದರೂ ನೆಲಮೂಲದ ಬದುಕನ್ನು ದಾಟಿ ಹೋಗಲಾಗಿಲ್ಲ ಎಂದರು.
ಹಿರಿಯ ವರದಿಗಾರ ಕಾಗತಿ ನಾಗರಾಜಪ್ಪ ಮಾತನಾಡಿ,ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಾಜ ಮತ್ತು ವರ್ತಮಾನದ ವಿದ್ಯಮಾನಗಳ ಬಗ್ಗೆ ಸೂಕ್ಷ್ಮತೆ ಹಾಗೂ ಕಾಳಜಿಯನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ವಸುಂಧರಾ ಮಾತನಾಡಿ,ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅಗತ್ಯ. ಕಾಲಕಾಲಕ್ಕೆ ಸಂಘಸಂಸ್ಥೆಗಳು , ಸರಕಾರದ ನೆರವಿನ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಉನ್ನತ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಪ್ರಭಾ ಮಾತನಾಡಿ, ಎಲ್ಲರ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ. ಜ್ಞಾನಕುಮಾರ್ ಅವರ ಕೀಬೋರ್ಡ್ ಹಾಗೂ ನವೀನ್ ಕುಮಾರ್ ಅವರ ತಬಲಾ ಪಕ್ಕವಾದ್ಯ ಗಾಯಕರಾದ ಹರೀಶ್‌ಕುಮಾರ್, ಆರ್,ನಟರಾಜ್ ಅವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು ಎಂದರು.
ಕಾರ್ಯಕ್ರಮದ ಭಾಗವಾಗಿ ನಡೆದ ಗೀತಗಾಯನ ಕಾರ್ಯಕ್ರಮದಲ್ಲಿ ಉತ್ತಮವಾಗಿ ಹಾಡಿ ಪ್ರತಿಭೆ ಪ್ರದರ್ಶನ ನೀಡಿದ ೧೦ ವಿದ್ಯಾಥಿಗಳಿಗೆ ಪುಸ್ತಕ ಬಹುಮಾನ ಸಹಿತ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಹಿರಿಯ ಗಾಯಕ ರಂಗಕರ್ಮಿ, ಗ.ನ. ಅಶ್ವತ್ಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.































