
ನವದೆಹಲಿ,ಜೂ. ೧೧- ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಯುದ್ಧದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಮಾತುಕತೆಗಳು ಹಳಿತಪ್ಪಿರುವ ಹಿನ್ನೆಲೆಯಲ್ಲಿ ಅಮೆರಿಕ ಸೇನೆಯು ಇರಾನ್‌ನ ಪ್ರಮುಖ ನಗರಗಳ ಮೇಲೆ ಇಂದು ಬೆಳಿಗ್ಗೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಇರಾ , ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿ ಎದಿರೇಟು ನೀಡಿದೆ.
ಫೆಬ್ರವರಿ ೨೮ ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಇಡೀ ವಿಶ್ವದ ಆರ್ಥಿಕತೆ ತಲ್ಲಣಗೊಂಡಿದ್ದು, ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ನಡುವೆ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮವು ಕೇವಲ ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಮುರಿದುಬಿದ್ದಂತಾಗಿದೆ.
ಇರಾನ್‌ನ ಹಲವು ನಗರಗಳಲ್ಲಿ ಸರಣಿ ಸ್ಫೋಟಅಮೆರಿಕದ ಸೆಂಟ್ರಲ್ ಕಮಾಂಡ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಇರಾನ್‌ನ ಮಿಲಿಟರಿ ಕಣ್ಗಾವಲು ಕೇಂದ್ರಗಳು, ಸಂವಹನ ವ್ಯವಸ್ಥೆಗಳು ಮತ್ತು ವಾಯು ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆಸಿದೆ. ಇರಾನ್‌ನ ದಕ್ಷಿಣ ಕರಾವಳಿ ನಗರಗಳಾದ ಬಂದರ್ ಅಬ್ಬಾಸ್, ಸಿರಿಕ್, ಮಿನಾಬ್ ಹಾಗೂ ಕಂಗನ್ ಸೇರಿದಂತೆ ಕೇಶ್ಮ್ ಮತ್ತು ಹೆಂಗಮ್ ದ್ವೀಪಗಳಲ್ಲಿ ಭೀಕರ ಸ್ಫೋಟಗಳು ಸಂಭವಿಸಿದ್ದು, ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿವೆ ಎಂದು ಇರಾನ್ ಮಾಧ್ಯಮಗಳು ಖಚಿತಪಡಿಸಿವೆ.
ಇರಾನ್ ಐಆರ್‌ಜಿಸಿ ಎಚ್ಚರಿಕೆಅಮೆರಿಕದ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವೈಮಾನಿಕ ಪಡೆಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮಜೀದ್ ಮೂಸವಿ ತೀವ್ರ ಎಚ್ಚರಿಕೆ ನೀಡಿದ್ದಾರೆ.”ನೀವೇನಾದರೂ ಕಾರ್ಯತಂತ್ರದ ದೃಷ್ಟಿಯಿಂದ ಪವಿತ್ರವಾದ ಹಾರ್ಮುಜ್ ಜಲಸಂಧಿಯನ್ನು ಅಸುರಕ್ಷಿತಗೊಳಿಸಲು ಯತ್ನಿಸಿದರೆ, ಇಡೀ ಇರಾನ್‌ನಾದ್ಯಂತ ನಿಮ್ಮ ವಿರುದ್ಧ ದಾಳಿ ನಡೆಸಿ ಇಡೀ ಪ್ರದೇಶವನ್ನೇ ನಿಮಗೆ ನರಕವನ್ನಾಗಿ ಮಾಡುತ್ತೇವೆ,” ಎಂದು ಅವರು ಗುಡುಗಿದ್ದಾರೆ.
ಅಲ್ಲದೆ, ಹೋರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಯಾವುದೇ ವಾಣಿಜ್ಯ ಅಥವಾ ತೈಲ ಹಡಗುಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಇರಾನ್ ಮಿಲಿಟರಿ ಕಮಾಂಡ್ ಘೋಷಿಸಿದೆ.ಬಹ್ರೇನ್, ಕುವೈತ್‌ನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಪ್ರತಿದಾಳಿಅಮೆರಿಕದ ವಾಯುದಾಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಇರಾನ್‌ನ ಐಆರ್‌ಜಿಸಿ ಪಡೆಗಳು ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಎರಡು ಹಂತಗಳ ಭಾರಿ ಕ್ಷಿಪಣಿ ದಾಳಿ ನಡೆಸಿವೆ. ಕುವೈತ್‌ನ ಅಲಿ ಮತ್ತು ಅಹ್ಮದ್ ಏರ್ ಫೋರ್ಸ್ ಬೇಸ್‌ಗಳಲ್ಲಿರುವ ಸುಮಾರು ೧೮ ಪ್ರಮುಖ ಅಮೆರಿಕ ಮಿಲಿಟರಿ ಗುರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇರಾನ್‌ನ ಐಆರ್‌ಎನ್‌ಎ ಸುದ್ಧಿ ಸಂಸ್ಥೆ ವರದಿ ಮಾಡಿದೆ.
ಜೊತೆಗೆ ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿ ಹಾಗೂ ಶೇಖ್ ಇಸಾ ವಾಯು ನೆಲೆಯನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ಬಹ್ರೇನ್‌ನಾದ್ಯಂತ ಸೈರನ್ ಸದ್ದು ಮೊಳಗಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಬಹ್ರೇನ್ ಆಂತರಿಕ ಸಚಿವಾಲಯ ಸೂಚಿಸಿದೆ. ಪ್ರಮುಖಾಂಶಗಳು ಮಾತುಕತೆ ಹಳಿತಪ್ಪಿದ್ದಕ್ಕೆ ದಾಳಿ: ಇರಾನ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮಿಲಿಟರಿ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಇರಾನ್ ಹೇಳಿಕೊಂಡಿದ್ದರೂ, ವಾಣಿಜ್ಯ ಹಡಗುಗಳ ಸಂಚಾರ ಮುಂದುವರಿದಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದೆ.ಜಾಗತಿಕ ಆರ್ಥಿಕತೆಗೆ ಪೆಟ್ಟು: ಈ ಯುದ್ಧದಿಂದಾಗಿ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿದೆ.
ಅಮೆರಿಕ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಒಮಾನ್ ಕರಾವಳಿಯ ಹೊರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಸರಕು ಹಡಗಿನ ಮೇಲೆ ಅಮೆರಿಕ ಮಿಲಿಟರಿ ನಡೆಸಿದ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.
ಪಲಾವ್ ಧ್ವಜ ಹೊಂದಿದ್ದ ‘ಎಂ.ಟಿ. ಸೆಟ್ಟೆಬೆಲ್ಲೋ’ ಎಂಬ ತೈಲ ಸಾಗಣೆ ನಾವಕೆಯಲ್ಲಿ ಒಟ್ಟು ೨೪ ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಗಲ್ಫ್ ಆಫ್ ಒಮಾನ್ ಮೂಲಕ ಹಾದುಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಘಟನೆಯ ನಂತರ ನಾಪತ್ತೆಯಾಗಿದ್ದ ಮೂವರು ಭಾರತೀಯರು ಮೃತಪಟ್ಟಿರುವುದನ್ನು ಕೇಂದ್ರ ಹಡಗು ಮತ್ತು ಬಂದರು ಸಚಿವ ಸರ್ಬಾನಂದ್ ಸೋನೊವಾಲ್ ಇಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಎಂ.ಟಿ. ಸೆಟ್ಟೆಬೆಲ್ಲೋ ಹಡಗಿನ ಮೇಲಿನ ದಾಳಿಯ ಸುದ್ದಿ ಅತ್ಯಂತ ದುರದೃಷ್ಟಕರ. ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮೂವರೂ ಮೃತಪಟ್ಟಿರುವುದು ದೃಢಪಟ್ಟಿದೆ. ಇದು ದೇಶದ ಕಡಲ ರಂಗಕ್ಕೆ ತುಂಬಲಾರದ ನಷ್ಟ. ಈ ಕಠಿಣ ಸಮಯದಲ್ಲಿ ಮೋದಿ ಸರ್ಕಾರವು ಸಂತ್ರಸ್ತ ಕುಟುಂಬಗಳ ಪರವಾಗಿ ನಿಲ್ಲಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡಲಿದೆ” ಎಂದು ಸಚಿವ ಸೋನೊವಾಲ್ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಮೃತರ ಪಾರ್ಥೀವ ಶರೀರಗಳನ್ನು ಶೀಘ್ರವಾಗಿ ತಾಯ್ನಾಡಿಗೆ ತರಲು ಹಾಗೂ ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



























