
ಯಾದಗಿರಿ: ತಾಲೂಕಿನ ಯರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗೋಳ ಗ್ರಾಮದ ವಾರ್ಡ್ ನಂ. ೨ರಲ್ಲಿ ಮೂಲಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ಗ್ರಾಮಸ್ಥರು ಹಲವು ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಹಾಗೂ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಶನಿವಾರ ವಿನೂತನ ಪ್ರತಿಭಟನೆ ನಡೆಸಲಾಯಿತು.
ಬೆಳಂಬೆಳಗ್ಗೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಉಮೇಶ ಕೆ. ಮುದ್ನಾಳ ಅವರು ವಾರ್ಡ್ ನಂ. ೨ರಲ್ಲಿ ಮಿಂಚಿನ ಕಾಲ್ನಡಿಗೆ ಸಂಚಾರ ನಡೆಸಿ, ತಮಟೆ ಬಾರಿಸುವ ಮೂಲಕ ಗ್ರಾಮದಲ್ಲಿನ ಮೂಲಸೌಲಭ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಬಳಿಕ ಗ್ರಾಮಸ್ಥರು ಹಾಗೂ ಮಹಿಳೆಯರೊಂದಿಗೆ ಕೈಯಲ್ಲಿ ಖಾಲಿ ಕೊಡ ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸಮರ್ಪಕ ಸಿಸಿ ರಸ್ತೆ, ಚರಂಡಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ತಗ್ಗು-ಗುಂಡಿಗಳಲ್ಲಿ ಕಲುಷಿತ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಅವರು ಆರೋಪಿಸಿದರು.
ಯರಗೋಳ ಗ್ರಾಮದಲ್ಲಿ ಪ್ರಮುಖವಾಗಿ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದಿರುವುದು, ತಗ್ಗು-ಗುಂಡಿಗಳಲ್ಲಿ ಕಲುಷಿತ ನೀರು ನಿಲ್ಲುವುದು, ಮಹಿಳೆಯರಿಗೆ ಶೌಚಾಲಯಗಳ ಕೊರತೆ, ಸಮರ್ಪಕ ಕುಡಿಯುವ ನೀರಿನ ಪೈಪ್‌ಲೈನ್ ಇಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿವೆ ಎಂದು ಪ್ರತಿಭಟನಾಕಾರರು ದೂರಿದರು.
ಯರಗೋಳ ಗ್ರಾಮದಿಂದ ಬೈಪಾಸ್ ರಸ್ತೆ ಮೂಲಕ ರೈಲ್ವೆ ಬ್ರಿಜ್‌ವರೆಗೆ ರೈತರ ಜಮೀನುಗಳಿಗೆ ತೆರಳುವ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ತಗ್ಗು-ಗುಂಡಿಗಳು ಹಾಗೂ ಜಾಲಿ ಕಂಟಿಗಳು ಬೆಳೆದು ರೈತರು ಜಮೀನುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಕೆಸರು ಹಾಗೂ ಹೊಲಸಿನಲ್ಲಿ ಬಿದ್ದು ಸಂಕಷ್ಟ ಎದುರಿಸುವುದು ನಿತ್ಯದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ, ವಾರ್ಡ್ನಲ್ಲಿ ಸಮರ್ಪಕ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳ ವ್ಯವಸ್ಥೆ ಇಲ್ಲದ ಕಾರಣ ಕೆಲವು ಪ್ರದೇಶಗಳಲ್ಲಿ ಕತ್ತಲಿನಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರು ತರಲು ಸಹ ಕಲುಷಿತ ನೀರು ನಿಂತಿರುವ ರಸ್ತೆಗಳಲ್ಲಿಯೇ ಸಂಚರಿಸಬೇಕಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಗ್ರಾಮಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಅನುದಾನ ಬರುತ್ತಿದ್ದರೂ, ಯರಗೋಳ ಗ್ರಾಮದ ವಾರ್ಡ್ ನಂ. ೨ರಲ್ಲಿ ಕನಿಷ್ಠ ಮೂಲಸೌಲಭ್ಯಗಳೇ ಇಲ್ಲದಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿಗೆ ಮೀಸಲಾದ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಸಂಬAಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಉಮೇಶ ಕೆ. ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗಾಗಿ ಸಂಬAಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಯಾದಗಿರಿ-ಕಲಬುರಗಿ ಮುಖ್ಯ ರಸ್ತೆಯ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾರಕೋಲು ಹಿಡಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮಾಶಂಕರ, ಮಲ್ಲೇಶಿ, ಸೂರ್ಯಕಾಂತ, ಶರಣಪ್ಪ, ಚಂದ್ರಪ್ಪ, ಸಾಬಣ್ಣ, ಬಸವರಾಜ, ಈಶಪ್ಪ, ದೇವಪ್ಪ, ನೀಲಕಂಠ, ಭೀಮಾ, ಲಕ್ಷ್ಮಣ, ಮೌನೇಶ, ಅಶೋಕ, ರೇಡ್ಡೆಪ್ಪ, ಮಲ್ಲಪ್ಪ, ಕಲ್ಲಪ್ಪ, ಕರ್ಣಪ್ಪ, ಮಹಾದೇವಪ್ಪ, ರಾಮಪ್ಪ, ಸೂರ್ಯ, ಮೋನಮ್ಮ, ನಿಂಗಮ್ಮ, ಮಲ್ಲಮ್ಮ, ಚಂದ್ರಮ್ಮ, ಬಸಮ್ಮ, ಸಾಬವ್ವ, ಮಹಾದೇವಿ, ಮಶೆಮ್ಮ, ಈಶಮ್ಮ, ಶರಣಮ್ಮ, ಭೀಮವ್ವ, ಕಾಂತಮ್ಮ, ಈರಮ್ಮ, ವಿಜ್ಜಮ್ಮ, ಗಂಗಮ್ಮ, ರೇಣಮ್ಮ, ಮರಮ್ಮ, ಗೌರಮ್ಮ, ಶಿವಲೀಲಾ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





























