
ತಿಪಟೂರು, ಜೂ. ೨೩- ನಗರದ ಬಿ.ಹೆಚ್. ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಮಾರು ೨೦ ಕೋಟಿ ರೂ. ವೆಚ್ಚದ ಭೂಗತ (ಯುಜಿ) ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕ ಕೆ. ಷಡಕ್ಷರಿ ಗುದ್ದಲಿ ಪೂಜೆ ನೆರವೇರಿಸಿದರು.
ನಗರದ ಅರಳಿಕಟ್ಟೆ ಬಳಿ ಭೂಗತ ಯುಜಿ ಕೇಬಲ್ ಹಾಗೂ ಎಲ್.ಟಿ. ಎಬಿ ವಿದ್ಯುತ್ ಕೇಬಲ್ ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಿಪಟೂರು ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ರೂಪಿಸುವುದು ತಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಅಗತ್ಯವಾದ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿಗೆ ೬೦ ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದ್ದು, ಈಗಾಗಲೇ ಬಳುವನೇರಳು ಸೇರಿದಂತೆ ಹಲವೆಡೆ ೨೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇನ್ನೂ ೪೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಭೂಮಿ ಹುಡುಕಲಾಗುತ್ತಿದೆ. ಹಾಲ್ಕುರಿಕೆ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಬಳಿ ಸೋಲಾರ್ ಪ್ಲಾಂಟ್ ಮೂಲಕ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ ಎಂದರು.
ತಾಲ್ಲೂಕಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಕೆ.ಬಿ. ಕ್ರಾಸ್ ಬಳಿ ಕೆಎಂಆರ್‌ಐಡಿಸಿ ಅನುದಾನದಲ್ಲಿ ೩೦೦ ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಲಾಗಿದ್ದು, ತಿಪಟೂರು ಕೆರೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆ ಕಾಮಗಾರಿ ಆರಂಭಗೊಳ್ಳಲಿರುವುದರಿಂದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದೆಹಲಿ ಪ್ರವಾಸದ ವೇಳೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಆತಂಕ ಪಡುವ ಅಗತ್ಯವಿಲ್ಲ.
ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತರೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ. ಜನರು ನೀಡಿರುವ ಅಧಿಕಾರವನ್ನು ಅಭಿವೃದ್ಧಿಗೆ ಬಳಸಬೇಕು. ಟೀಕೆಗಳು ಅಳಿದು ಹೋಗುತ್ತವೆ, ಅಭಿವೃದ್ಧಿ ಮಾತ್ರ ಉಳಿಯುತ್ತದೆ ಎಂದರು.
ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಅಗತ್ಯ ಮೂಲ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ದೊಡ್ಡಪೇಟೆ ರಸ್ತೆಯನ್ನು ೪೦ ಅಡಿ ಅಗಲಕ್ಕೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ೩೦ ಅಡಿ ಅಗಲ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುವುದು. ಅದೇ ರೀತಿ ರೈಲ್ವೆ ಸ್ಟೇಷನ್ ರಸ್ತೆಯನ್ನು ೬೦ ಅಡಿ ಬದಲಿಗೆ ೪೦ ಅಡಿ ಅಗಲಕ್ಕೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆಯನ್ನು ಟಾಟಾ ಪವರ್ ಕಂಪೆನಿಗೆ ನೀಡುವ ಕುರಿತು ಪ್ರಸ್ತಾವನೆ ಬಂದಿದ್ದು, ವಿದ್ಯುತ್ ನಿಗಮಗಳ ಖಾಸಗೀಕರಣವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಯಾವುದೇ ಕಾರಣಕ್ಕೂ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ನರಸಿಂಹಮೂರ್ತಿ, ಸೋಮಶೇಖರಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಸುದರ್ಶನ್, ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮಡೆನೂರು ಕಾಂತರಾಜು, ತಾ.ಪಂ. ಮಾಜಿ ಅಧ್ಯಕ್ಷ ನಾಕೇನಹಳ್ಳಿ ಸುರೇಶ್, ಬೆಸ್ಕಾಂ ಎಇಇ ಟಿ.ಎಲ್. ಮನೋಹರ್, ಲೆಕ್ಕಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಬೆಸ್ಕಾಂ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಸ್ಥಳೀಯ ಸಮಿತಿಯ ಅಧ್ಯಕ್ಷ ಏನಯ್ಯ, ಸ್ವಾಮಿ, ಹರಿಹರಪ್ಪ, ಪ್ರದೀಪ್, ಸುಜಿತ್ ಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

































