
ಕಲಬುರಗಿ, ಜು.26- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಡಾ. ಹಫೀಜ್ ಸಯ್ಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರು, ಕಲಬುರಗಿ ನಗರದ ಯತೀಂ ಖಾನಾ, ಅಂಜುಮನ್ ಅನ್ಸಾರುಸ್-ಸುಫ್ಫಾಗೆ ಭೇಟಿ ನೀಡಿ, ವಕ್ಫ್ ಸಂಸ್ಥೆಯ ಆಡಳಿತ, ಕಾರ್ಯನಿರ್ವಹಣೆ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿಯನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಡಾ. ಅಲ್ ಹುಸೈನಿ ಅವರು ಯತೀಂ ಖಾನಾದ ಎಸಿಎಫ್ ಆಡಳಿ ವಿಭಾಗದ ಮೊಹಮ್ಮದ್ ಮುಜೀಬುದ್ದೀನ್ ಹಾಗೂ ಕಲಬುರಗಿ ವಕ್ಫ್ ಅಧಿಕಾರಿ ಪರ್ವೇಜ್ ಆಲಂ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಸಂಸ್ಥೆಯ ದೈನಂದಿನ ಆಡಳಿತ, ವಕ್ಫ್ ಆಸ್ತಿಗಳ ನಿರ್ವಹಣೆ, ಶೈಕ್ಷಣಿಕ ಮತ್ತು ಕಲ್ಯಾಣ ಕಾರ್ಯಕ್ರಮಗಳು ಹಾಗೂ ಮಕ್ಕಳಿಗೆ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸುವ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಭೇಟಿಯ ಭಾಗವಾಗಿ ಅಧ್ಯಕ್ಷರು, ವಿದ್ಯಾರ್ಥಿಗಳು ಮತ್ತು ಆಡಳಿತಾಧಿಕಾರಿಗಳು, ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಅವರ ಅಗತ್ಯತೆಗಳು ಹಾಗೂ ಕುಂದುಕೊರತೆಗಳನ್ನು ಆಲಿಸಿದರು. ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಬಳಿಕ ಅವರು ಯತೀಂ ಖಾನಾದ ಆವರಣವನ್ನು ಪರಿಶೀಲಿಸಿ, ವಸತಿ, ಶಿಕ್ಷಣ, ಊಟದ ವ್ಯವಸ್ಥೆ ಹಾಗೂ ನಿವಾಸಿ ಮಕ್ಕಳಿಗೆ ಒದಗಿಸಲಾಗುತ್ತಿರುವ ಇತರೆ ಮೂಲಭೂತ ಸೌಲಭ್ಯಗಳನ್ನು ವೀಕ್ಷಿಸಿದರು.
ಡಾ. ಅಲ್ ಹುಸೈನಿ ಅವರು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು. ವಕ್ಫ್ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಮಕ್ಕಳಿಗೆ ಉತ್ತಮ ಆರೈಕೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಅಲ್ಲದೆ, ಅನಾಥ ಹಾಗೂ ಹಿಂದುಳಿದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳು ಮತ್ತು ಸಮಗ್ರ ಕಲ್ಯಾಣ ಒದಗಿಸುವ ಉದ್ದೇಶದ ಎಲ್ಲಾ ಯೋಜನೆಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಂದೆಯೂ ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದರು



























