
ಬೀಜಿಂಗ್.ಜು೧೨: ಪ್ರಕೃತಿ ವಿಕೋಪದಿಂದ ಜಾಗತಿಕ ಮಟ್ಟದಲ್ಲಿ ತಲ್ಲಣಗೊಂಡಿರುವ ಚೀನಾಕ್ಕೆ ಈಗ ಮತ್ತೊಂದು ಭೀಕರ ಚಂಡಮಾರುತದ ಆಘಾತ ಎದುರಾಗಿದೆ. ಕೇವಲ ಒಂದು ವಾರದ ಅವಧಿಯಲ್ಲಿ ಚೀನಾ ದೇಶಕ್ಕೆ ಅಪ್ಪಳಿಸುತ್ತಿರುವ ಎರಡನೇ ಪ್ರಬಲ ಚಂಡಮಾರುತ ಇದಾಗಿದ್ದು, ಕರಾವಳಿ ತೀರದ ಸುಮಾರು ೧೭ ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಸುಮಾರು ೧,೦೦೦ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ’ಬಾವಿ’ ಚಂಡಮಾರುತವು ಚೀನಾದ ಕರಾವಳಿ ನಗರವಾದ ತೈಝೌ ಮೂಲಕ ಭೂಮಿಗೆ ಅಪ್ಪಳಿಸಿತು. ತದನಂತರ ಮಧ್ಯರಾತ್ರಿಯ ವೇಳೆಗೆ ವೆನ್‌ಝೌ ನಗರದ ಮೂಲಕ ಎರಡನೇ ಬಾರಿಗೆ ತೀರ ದಾಟಿದೆ. ಸುಮಾರು ೧ ಕೋಟಿ ಜನಸಂಖ್ಯೆ ಹೊಂದಿರುವ ವೆನ್‌ಝೌ ನಗರಕ್ಕೆ ಚಂಡಮಾರುತವು ಅತ್ಯಂತ ಹತ್ತಿರದಲ್ಲಿ ಹಾದುಹೋಗುತ್ತಿರುವುದರಿಂದ ಹೈ-ಅಲರ್ಟ್ ಘೋಷಿಸಲಾಗಿದೆ.
ಈ ಚಂಡಮಾರುತದ ತೀವ್ರತೆಗೆ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಈಗಾಗಲೇ ಕನಿಷ್ಠ ೧೭ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಜಪಾನ್‌ನ ಇಶಿಗಾಕಿ ಸೇರಿದಂತೆ ಹಲವು ದ್ವೀಪಗಳಿಗೆ ಅಪ್ಪಳಿಸಿದ್ದ ಚಂಡಮಾರುತ, ಅಲ್ಲಿನ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿತ್ತು. ತೈವಾನ್‌ನ ಉತ್ತರ ಭಾಗದಲ್ಲೂ ಸಹ ೧ ಮೀಟರ್‌ನಷ್ಟು (೩೯ ಇಂಚು) ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಸುರಕ್ಷಿತ ಕ್ರಮವಾಗಿ ಸಾವಿರಾರು ಜನರನ್ನು ಮನೆಗಳಿಂದ ತೆರವುಗೊಳಿಸಲಾಗಿದೆ.
ಪ್ರಸ್ತುತ ಚಂಡಮಾರುತವು ’ಕ್ಯಾಟಗರಿ ೧’ ಮಟ್ಟಕ್ಕೆ ದುರ್ಬಲಗೊಂಡಿದ್ದರೂ, ಅದರ ಒಳಗೆ ಅಡಗಿರುವ ಭಾರಿ ತೇವಾಂಶದ ಕಾರಣದಿಂದಾಗಿ ಝೆಜಿಯಾಂಗ್ ಮತ್ತು ಫುಜಿಯನ್ ಪ್ರಾಂತ್ಯಗಳಲ್ಲಿ “ಅತ್ಯಂತ ಭೀಕರ ಮಳೆ”ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ:ಝೆಜಿಯಾಂಗ್ ಪ್ರಾಂತ್ಯದಲ್ಲಿ ಶಾಲೆಗಳು, ಕಚೇರಿಗಳು ಮತ್ತು ಹೊರಾಂಗಣ ಚಟುವಟಿಕೆಗಳನ್ನು ಸಂಪೂರ್ಣವಾಗಿಸ್ಥಗಿತಗೊಳಿಸಲಾಗಿದೆ.೪೦೦ ಕ್ಕೂ ಹೆಚ್ಚು ವಿಮಾನ ಯಾನಗಳು ಹಾಗೂ ಹತ್ತಾರು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ.ದಿನಸಿ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರಿಂದ ಸೂಪರ್‌ಮಾರ್ಕೆಟ್‌ಗಳ ಕಪಾಟುಗಳು ಖಾಲಿಯಾಗಿವೆ.
ಕೆಲವೇ ದಿನಗಳ ಹಿಂದಷ್ಟೇ ಅಪ್ಪಳಿಸಿದ್ದ ’ಮೇಸ್ಯಾಕ್’ ಚಂಡಮಾರುತದ ಭೀಕರತೆಯಿಂದ ಚೀನಾ ಇನ್ನೂ ಚೇತರಿಸಿಕೊಂಡಿಲ್ಲ. ಮೇಸ್ಯಾಕ್ ಚಂಡಮಾರುತಕ್ಕೆ ಕನಿಷ್ಠ ೩೯ ಜನರು ಬಲಿಯಾಗಿದ್ದರು ಮತ್ತು ಅಪಾರ ಪ್ರಮಾಣದ ಜಾನುವಾರುಗಳು ಸಾವನ್ನಪ್ಪಿ ಕೃಷಿ ವಲಯಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಅಷ್ಟೇ ಅಲ್ಲದೆ, ಹುಬೈ ಪ್ರಾಂತ್ಯದಲ್ಲಿ ಅಪರೂಪದ ಎರಡು ಸುಂಟರಗಾಳಿಗಳೂ ಸೃಷ್ಟಿಯಾಗಿದ್ದವು. ಆ ದುರಂತದ ಬೆನ್ನಲ್ಲೇ ಈಗ ’ಬಾವಿ’ ಚಂಡಮಾರುತವು ಚೀನಾದ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
































