
ಬೆಂಗಳೂರು, ಜೂನ್ ೧೯:ನಗರದ ವರ್ತೂರು ಸಮೀಪದ ಬೆಳಗೆರೆಯ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ನಡೆದ ಭೀಕರ ಅವಘಡದಲ್ಲಿ ಇಬ್ಬರು ಕಾರ್ಮಿಕರು ಟ್ಯಾಂಕ್‌ಗೆ ಬಿದ್ದು ನಾಪತ್ತೆಯಾಗಿದ್ದು, ಅವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಬ್ಬ ಕಾರ್ಮಿಕನನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಸುಮಾರು ೫ ರಿಂದ ೬ ಗಂಟೆಯ ನಡುವೆ ಈ ದುರ್ಘಟನೆ ನಡೆದಿದೆ. ಘಟಕದ ತ್ಯಾಜ್ಯ ನೀರು ಸಂಸ್ಕರಣಾ ಟ್ಯಾಂಕ್‌ನ ಮೂರು ಗೇಟ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಮೂವರು ಕಾರ್ಮಿಕರು ಸುಮಾರು ೪೦ ಅಡಿ ಆಳದ ಟ್ಯಾಂಕ್‌ಗೆ ಆಯತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ಕಾರ್ತಿಕ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಮಿಳುನಾಡು ಮೂಲದ ಎಂಜಿನಿಯರ್ ಅಗಿಲನ್ ಮೋಹನ್ (ಅಖಿಲೇಶ್) ಹಾಗೂ ಬಿಹಾರ ಮೂಲದ ಬ್ರಜೇಶ್ ಕುಮಾರ್ ಟ್ಯಾಂಕ್‌ನಲ್ಲಿ ನಾಪತ್ತೆಯಾಗಿದ್ದಾರೆ.
ಟ್ಯಾಂಕ್‌ನಲ್ಲಿ ಸುಮಾರು ೧೦ ಅಡಿಗೂ ಹೆಚ್ಚು ತ್ಯಾಜ್ಯ ನೀರು ತುಂಬಿಕೊಂಡಿರುವುದರಿಂದ ಹಾಗೂ ನೀರಿನ ಹರಿವು ಹೆಚ್ಚಿರುವ ಕಾರಣ ಶೋಧ ಕಾರ್ಯಕ್ಕೆ ಅಡಚಣೆಯಾಗಿದೆ. ಮೃತದೇಹಗಳ ಪತ್ತೆಗಾಗಿ ಹಗ್ಗಕ್ಕೆ ಗ್ರ್ಯಾಪಲ್ ನೆಲ್ ಕಟ್ಟಿ ಟ್ಯಾಂಕ್ ಒಳಗೆ ಹುಡುಕಾಟ ನಡೆಸಲಾಗುತ್ತಿದೆ. ಟ್ಯಾಂಕ್‌ನಲ್ಲಿರುವ ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ಹೊರಹಾಕದೆ ಮೃತದೇಹಗಳ ಪತ್ತೆ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಎನ್‌ಡಿಆರ್‌ಎಫ್ ತಂಡ ಹಾಗೂ ವರ್ತೂರು ಪೊಲೀಸರು ಭೇಟಿ ನೀಡಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರ್ಮಿಕರು ಸಮರ್ಪಕ ಸುರಕ್ಷತಾ ಸಾಧನಗಳನ್ನು ಬಳಸದೇ ಟ್ಯಾಂಕ್‌ಗೆ ಇಳಿದಿರುವ ಸಾಧ್ಯತೆ ಇದ್ದು, ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವಘಡದ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.
ತನಿಖೆಗೆ ಆದೇಶ
ಬೆಂಗಳೂರಿನ ವರ್ತೂರಿನಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಕರ್ತವ್ಯದಲ್ಲಿದ್ದ ಮೂವರು ಕಾರ್ಮಿಕರು ಆಕಸ್ಮಿಕವಾಗಿ ಎಸ್‌ಟಿಪಿ ಪ್ಲಾಂಟ್‌ನೊಳಗೆ ಬಿದ್ದಿದ್ದು, ಸದ್ಯ ಒಬ್ಬ ಕಾರ್ಮಿಕನ ಪತ್ತೆಯಾಗಿದ್ದು, ಉಳಿದ ಇಬ್ಬರು ಕಾರ್ಮಿಕರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಡಬ್ಲ್ಯೂಎಸ್‌ಎಸ್‌ಬಿ, ದುರಂತದ ಕುರಿತು ಸಮಗ್ರ ತನಿಖೆ ನಡೆಸಿ ೨೪ ಗಂಟೆಯೊಳಗೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದೆ.
ಪ್ರಕರಣದ ತೀವ್ರತೆಯನ್ನು ಗಣನೆಗೆ ತೆಗೆದುಕೊಂಡು ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರಾದ ಡಾ. ಮಂಜುಳಾ ಎನ್. ಅವರು ತಕ್ಷಣವೇ ತನಿಖೆಗೆ ಆದೇಶಿಸಿದ್ದಾರೆ. ನಾಳೆ ಮಧ್ಯಾಹ್ನ ೧೨ ಗಂಟೆಯ ಒಳಗಾಗಿ ಘಟನೆಗೆ ಸಂಬಂಧಿಸಿದ ಸಂಪೂರ್ಣ ತನಿಖಾ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೂವರು ಹಿರಿಯ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ರಚನೆ
ದುರಂತದ ಹಿನ್ನೆಲೆ, ಸುರಕ್ಷತಾ ಲೋಪಗಳು ಹಾಗೂ ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ಮೂವರು ಹಿರಿಯ ಇಂಜಿನಿಯರ್‌ಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ತಂಡದಲ್ಲಿ ಡಾ. ಕೆ.ಎನ್. ರಾಜೀವ್ ಮುಖ್ಯ ಅಭಿಯಂತರರು ಕೆ.ಎಸ್. ರೇಣುಕುಮಾರ್ ಅಪರ ಮುಖ್ಯ ಅಭಿಯಂತರರು ವಿನುತ ಡಿ.ಎಸ್. ಉಪಮುಖ್ಯ ಅಭಿಯಂತರರು ಇದ್ದಾರೆ.
“ಕಾರ್ಮಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ಈ ಘೋರ ದುರಂತಕ್ಕೆ ಕಾರಣವೇನು ಮತ್ತು ಅಲ್ಲಿನ ಸುರಕ್ಷತಾ ಕ್ರಮಗಳ ಲೋಪಗಳೇನು ಎಂಬುದರ ಕುರಿತು ಮೂವರು ಅಧಿಕಾರಿಗಳ ತಂಡವು ನಿಖರ ತನಿಖೆ ನಡೆಸಿ ನಿಗದಿತ ಸಮಯದೊಳಗೆ ವರದಿ ನೀಡಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.”
ಸ್ಥಳದಲ್ಲಿ ಸದ್ಯ ರಕ್ಷಣಾ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ನಾಪತ್ತೆಯಾದ ಇಬ್ಬರು ಕಾರ್ಮಿಕರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

























