
ಬೆಂಗಳೂರು:ಜೂ. ೧೯ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಮೀರ್ ಸಾದಿಕರ ವಿರುದ್ಧ ಖಂಡಿತ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅಡ್ಡ ಮತದಾನವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದರು.
ಎಂಟತ್ತು ದಿನಗಳ ಹಿಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರೆ ಮಾಡಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸೋಣ ಎಂದು ಹೇಳಿದ್ದರು. ನೀವಾದರೂ ಹಾಕಿ ನಾವಾದರೂ ಹಾಕ್ತೇವೆ. ಒಳ್ಳೆ ಉದ್ದೇಶ ಇಟ್ಟುಕೊಂಡು ಫೈಟ್ ಮಾಡೋಣ ಎಂದಿದ್ದರು. ಆಗ ನೀವೇ ಅಭ್ಯರ್ಥಿ ಹಾಕಿ ಒಟ್ಟಾಗಿ ಸೆಣಸಾಟ ಮಾಡೋಣ ಎಂದು ತಿಳಿಸಿದ್ದೆ. ಎರಡೂ ಪಕ್ಷಗಳ ಉದ್ದೇಶ ಒಂದೇ ಆಗಿತ್ತು. ನಿನ್ನೆ ನಡೆದ ಮತದಾನದಲ್ಲಿ ಜೆಡಿಎಸ್‌ಯಿಂದ ಆರೇಳು ಅಡ್ಡ ಮತದಾನ ಆಗಿದೆ. ಬಿಜೆಪಿಯಿಂದ ನಾಲ್ಕೈದು ಅಡ್ಡ ಮತದಾನ ಆಗಿದೆ. ಇದರಿಂದ ಎರಡೂ ಪಕ್ಷಗಳಿಗೆ ಬೇಸರವಾಗಿದೆ ಎಂದು ಹೇಳಿದರು.
ಯಾರು ಅಡ್ಡ ಮತದಾನ ಮಾಡಿ ಆಟ ಆಡಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲು ಭೇಟಿ ಮಾಡಲು ಅವಕಾಶಕ್ಕೆ ಮನವಿ ಮಾಡಿದ್ದೇನೆ. ಅವರು ಯಾವಾಗ ಅವಕಾಶ ಕೊಟ್ಟರೂ ಭೇಟಿ ಮಾಡಿ ವಿವರ ನೀಡಲಿದ್ದೇನೆ ಎಂದು ವಿವರಿಸಿದರು.
ಬಿಜೆಪಿ ಟೆಕೆಟ್‌ನಲ್ಲಿ ಗೆದ್ದು ಚುನಾವಣೆಯಲ್ಲಿ ಈ ರೀತಿ ಮತದಾನ ಮಾಡ್ತಾರೆ ಎಂದರೆ ಅವರಿಗೆ ಗೆರೆ ಎಳೆಯುವ ಕೆಲಸವನ್ನು ಪಕ್ಷ ಮಾಡಲಿದೆ. ಎಲ್ಲದಕ್ಕೂ ಒಂದು ಮಿತಿ ಇದೆ. ಬಿಜೆಪಿಯಲ್ಲಿನ ಸಣ್ಣಪುಟ್ಟ ಗೊಂದಲದಿಂದಾಗಿ ಕಾರ್ಯಕರ್ತರು ಬೇಸತ್ತಿದ್ದಾರೆ. ಈಗ ಇಂತಹ ಬೆಳವಣಿಗೆ ನಡೆದಿದೆ. ಇದರಿಂದ ನೋವಾಗಿದೆ. ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಎರಡೂ ಪಕ್ಷದ ಮುಖಂಡರು ಕುಳಿತು ತೀರ್ಮಾನ ಮಾಡಿದ್ದೆವು. ನಮ್ಮ ಪಕ್ಷದ ಇಬ್ಬರು ಗೆಲವು ಸಾಧಿಸಿರಬಹುದು. ಆದರೆ ಅಡ್ಡ ಮತದಾನದಿಂದ ಅಪಮಾನ ಆಗಿದೆ. ಇದನ್ನೆಲ್ಲ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಗಂಭೀರವಾಗಿ ಪರಿಗಣನೆ…
ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಪಕ್ಷದ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅಧ್ಯಕ್ಷನಾಗುವುದಕ್ಕೂ ಮೊದಲು ನಾನು ಕಾರ್ಯಕರ್ತ. ಪಕ್ಷದ ಹೈಕಮಾಂಡ್ ಕಾಲಕಾಲಕ್ಕೆ ಏನೇನು ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ. ಇಂತಹ ಮಹತ್ವದ ಚುನಾವಣೆಯಲ್ಲಿ ಹೀಗೆ ಆಗುತ್ತದೆ ಎಂಬ ಕಲ್ಪನೆ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಣಕ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ಜನ ಚಾಣಕ್ಯರನ್ನು ರಾಜ್ಯದ ಜನ ನೋಡಿದ್ದಾರೆ. ಕುದುರೆ ಓಡೋ ಟೈಮಲ್ಲಿ ಓಡುತ್ತದೆ ಬೀಳೋ ಟೈಮಲ್ಲಿ ಬೀಳುತ್ತದೆ. ಬಿಜೆಪಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ದೊಡ್ಡ ಸಂಘಟನೆ ಇದೆ. ಕಾರ್ಯಕರ್ತರ ಶಕ್ತಿ ಇದೆ. ಯಾರನ್ನು ಯಾವಾಗ ಹೇಗೆ ಬಗ್ಗಿಸಬೇಕು ಎಂಬುದು ತಿಳಿದಿದೆ ಎಂದರು.
ಸಿಎಂ ಯಾರೇ ಆದರೂ ಹೆದರುವ ಪ್ರಶ್ನೆ ಇಲ್ಲ. ಸರ್ಕಾರ ಬಗ್ಗಿಸಲೂ ನಮಗೆ ಗೊತ್ತಿದೆ. ಇಂತಹ ಸಣ್ಣ ಪುಟ್ಟ ಘಟನೆಯಿಂದ ವಿಚಲಿತ ಆಗಿ ಓಡಿ ಹೋಗಲ್ಲ. ಎಲ್ಲವನ್ನು ಅರಗಿಸಿಕೊಳ್ಳಬಲ್ಲೇ ಎಂದರು.

























